ನ್ಯೂಸ್ ನಾಟೌಟ್ : ತುಳುನಾಡಿನ ದೈವಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಂಬಂತೆ ಅಪರೂಪದ ದೈವ ಕೋಲಕ್ಕೆ ಕರಾವಳಿ ಸಾಕ್ಷಿಯೆನಿಸಿ ಕೊಂಡಿದೆ.ದೈವ – ದೇವರು ಅಂದ್ರೆ ಅಪಾರ ಭಯ ಭಕ್ತಿಯಿಂದ ಕಾಣುವ ಕರಾವಳಿ ಮಂದಿ ಒಂದೇ ನೇಮೋತ್ಸವದಲ್ಲಿ 18 ಗುಳಿಗ ದೈವಗಳ (Guliga Daiva) ನರ್ತನ ನೋಡಿ ಪುಳಕಿತರಾದರು. ನೆರೆದವರಿಗಂತು ಈ ದೃಶ್ಯ ನೋಡಿ ಮೂಕ ವಿಸ್ಮಿತರಾದರು ಜತೆಗೆ ಭಯ ಭಕ್ತಿಯಿಂದ ಕೈ ಮುಗಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಬರ್ಕಜೆ ಎಂಬ ಸ್ಥಳ ಈ ಅಪರೂಪದ ದೈವ ಕೋಲಕ್ಕೆ ಪ್ರತ್ಯಕ್ಷ ಸಾಕ್ಷಿಯಾಯಿತು. ಒಂದೇ ದಿನ, ಒಂದೇ ದೈವದ 18 ಅಬ್ಬರ ಕಂಡು ದೈವಾರಾಧಕರು ಭಕ್ತಿಯಲ್ಲಿ ತೇಲಾಡಿದರು.ಈ ದೃಶ್ಯ ಕಣ್ತುಂಬಿಕೊಳ್ಳಲೆಂದೇ ಹಲವಾರು ಮಂದಿ ನೆರೆದಿದ್ದರು.ಮಾತ್ರವಲ್ಲ ಈ ವಿಶೇಷ ಕ್ಷಣದ ಸುದ್ದಿ ಕೇಳಿ ಇನ್ನೂ ಹಲವಾರು ಭಕ್ತರು ಆಗಮಿಸಿ ದೈವಗಳ ಕೃಪೆಗೆ ಪಾತ್ರರಾದರು.
ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂಭತ್ತು ಗುಳಿಗ ದೈವದ ನರ್ತನ ಸೇವೆ ನಡೆಯುತ್ತಿತ್ತು. ಆದ್ರೆ ಈ ಬಾರಿ ಸಂಪ್ರದಾಯದಂತೆ ಒಂಭತ್ತು ಹಾಗೂ ಹರಕೆಯ ರೂಪದಲ್ಲಿ ಒಂಭತ್ತು,ಹೀಗೆ ಒಟ್ಟು 18 ಗುಳಿಗ ದೈವದ ನರ್ತನ ಸೇವೆ ನಡೆದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.18 ಗುಳಿಗ ದೈವದ ವಿಶೇಷ ಗಗ್ಗರ ಸೇವೆಯನ್ನು ಕಣ್ತುಂಬಿಕೊಳ್ಳುದಕ್ಕೆ ಮುಂಬೈ, ಬೆಂಗಳೂರು ಸೇರಿದಂತೆ ಪರವೂರಿನಲ್ಲಿ ನೆಲೆಸಿರುವ ಕರಾವಳಿಯ ಸಾವಿರಾರು ದೈವಾರಾಧಕರು ಸೇರಿದ್ದರು. ಗುಳಿಗ ದೈವಗಳ ಗಗ್ಗರ ಸೇವೆ ನೋಡಿ ಜನ್ಮ ಪಾವನವಾಗುವಷ್ಟರ ಮಟ್ಟಿಗೆ ಸಂತೃಪ್ತರಾದರು.