ನ್ಯೂಸ್ ನಾಟೌಟ್ : ತುಳುನಾಡಿಗೆ ಅದರದ್ದೇ ಆದ ಸಂಸ್ಕೃತಿ ಇತಿಹಾಸವಿದೆ. ತುಳು ಭಾಷೆ ಆಚಾರ -ವಿಚಾರದ ವಿಷಯ ಬಂದಾಗ ಜಾತಿ ಧರ್ಮವನ್ನು ಮೀರಿ ಇಲ್ಲಿನ ಜನರೆಲ್ಲರು ಒಟ್ಟಾಗಿ ನಿಲ್ಲುತ್ತಾರೆ. ಇದು ಹೌದು ಅನ್ನೋದಕ್ಕೆ ಹಲವು ಬಾರಿ ಪ್ರೂವ್ ಆಗಿದೆ.ಅಂದು ದೈವಗಳ ಬಗ್ಗೆ ಇಲ್ಲಿನ ಸಂಸ್ಕೃತಿ ಆಚಾರ-ವಿಚಾರದ ಬಗ್ಗೆ ಮಾತನಾಡಿದ್ದ ತುಳುನಾಡಿನ ರಾಜಕಾರಣಿ ಯುಟಿ. ಖಾದರ್ ಸದನದಲ್ಲಿಯೂ ಮಾತನಾಡಿದ್ದರು. ಇಂದು ಅವರು ಅಧಿಕಾರದಲ್ಲಿ ಸ್ಪೀಕರ್ ಸ್ಥಾನಕ್ಕೇರಿದ್ದಾರೆ. ದೈವಗಳ ಬಗ್ಗೆ ಹಗುರವಾಗಿ ಮಾತನಾಡಿದ್ದ ರಾಜಕಾರಣಿಯೊಬ್ಬರು ಎಲೆಕ್ಷನ್ನಲ್ಲಿ ಸೋತು ಮನೆಯಲ್ಲಿ ಕುಳಿತಿದ್ದರು.ಆ ವಿಚಾರ ಭಾರಿ ವೈರಲ್ ಆಗಿತ್ತು.ಇದೀಗ ಯುಟಿ ಖಾದರ್ ಅವರು ಇದೇ ವಿಚಾರವಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರು ದೈವಗಳ ಹರಕೆಕೋಲ ನೆರವೇರಿಸಿದ್ದರು.ಇದಕ್ಕೆ ಹಲವರು ಮೆಚ್ಚುಗೆಯನ್ನೂ ಸೂಚಿಸಿದ್ದರೂ ಕೂಡ ಇದಕ್ಕೆ ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ಪನೋಲಿ ಬೈಲ್ನಲ್ಲಿ ನಡೆದಿದ್ದ ಹರಕೆ ಕೋಲದಲ್ಲಿ ಯುಟಿ ಖಾದರ್ ಭಾಗಿಯಾಗಿದ್ದರು. ಈ ವೇಳೆ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಆಶೀರ್ವಾದ ಪಡೆದು ಹರಕೆ ಕೋಲ ನೆರವೇರಿಸಿದ್ದರು. ಇದು ಮುಸ್ಲಿಂ ಧಾರ್ಮಿಕ ಮುಖಂಡನ ಕೆಂಗಣ್ಣಿಗೆ ಗುರಿಯಾಗಿದೆ. ಒರ್ವ ಮುಸ್ಲಿಂನಾಗಿ ದೈವಗಳ ಕೋಲ ನೇರವೇರಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ. ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ಬಂದಿವೆ.
ಕೊರಗಜ್ಜನ ಭಕ್ತ ಯು.ಟಿ. ಖಾದರ್ ಅವರನ್ನು ಮುಸ್ಲಿಮರು ಬರೀ ರಾಜಕಾರಣಿಯಾಗಿ ಕಂಡರೆ ಸಾಕು. ಧಾರ್ಮಿಕ ಮುಂದಾಳುವಾಗಿ ಕಾಣುವುದು, ಉಲಮಾ, ಸಾತ್ವಿಕರು ತುಂಬಿದ ಧಾರ್ಮಿಕ ವೇದಿಕೆಗೆ ಮುಸ್ಲಿಮ್ ನಾಯಕನಾಗಿ ಹತ್ತಿಸುವುದು ತರವಲ್ಲ. ಅದು ಆತನ ಭೂತಾರಾಧನೆಗೆ ನಾವು ಕೊಡುವ ಅಂಗೀಕಾರವಾದೀತು..ಖಾದರ್ ಕೊರಗಜ್ಜನಿಗೂ ಕಲ್ಲುರ್ಟಿ, ಪಂಜುರ್ಲಿಗೋ ಆರಾಧಿಸಲಿ, ಪ್ರಸಾದ ಪಡೆದು ತಲೆಗೆ ಮೆತ್ತಿಕೊಂಡು ನರಕಕ್ಕೆ ಹೋಗಲಿ ಅದು ಆತನ ವೈಯಕ್ತಿಕ ಸ್ವಾತಂತ್ರ್ಯ. ಅದು ಭಾರತದಲ್ಲಿ ಎಲ್ಲರಿಗೂ ಇರುವ ಸಾಂವಿಧಾನಿಕ ಸ್ವಾತಂತ್ರ್ಯ. ಅದನ್ನು ತಡೆಯುವ ಹಕ್ಕು ನಮಗಿಲ್ಲ. ಆದರೆ ಧಾರ್ಮಿಕ ನಾಯಕನಾಗಿ ನಾವು ಅಂಗೀಕರಿಸುವುದು ಮಾತ್ರ ಆತನ ಭೂತಾರಾಧನೆಯನ್ನು ನಾವು ಒಪ್ಪಿಕೊಂಡಂತಾಗುತ್ತದೆ. ಉಲಮಾಗಳು ಅವನಿಗೆ ಗೌರವ ಕೊಡುವುದು ಮುಸ್ಲಿಮ್ ಸಮುದಾಯಕ್ಕೆ ಕೆಟ್ಟ ಸಂದೇಶವಾಗಿ ಪರಿಣಮಿಸುತ್ತದೆ ಎಂದು ಬರೆದುಕೊಂಡಿದ್ದಾರೆ ಸಾಲೆತ್ತೂರು ಫೈಝಿ.