ಬೆಂಗಳೂರು: ವೈದ್ಯಕೀಯ ಕಾಲೇಜುಗಳಲ್ಲಿನ ‘ಸೀಟು ಬ್ಲಾಕಿಂಗ್’ ದಂಧೆ ಮಾದರಿಯಲ್ಲಿ ಈ ಬಾರಿ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ಸೀಟುಗಳನ್ನು ಅಕ್ರಮವಾಗಿ ಹಂಚಿರುವ ಆರೋಪ ಕೇಳಿ ಬಂದಿದೆ. ಈ ಆರೋಪಗಳಿಗೆ ಪುಷ್ಟಿ ನೀಡುವಂತೆ, ಸರ್ಕಾರಿ ಶುಶ್ರೂಷಾ (ಸ್ಕೂಲ್ ಆಫ್ ನರ್ಸಿಂಗ್) ಸಂಸ್ಥೆಗಳಲ್ಲಿನ ನರ್ಸಿಂಗ್ (ಜಿಎನ್ಎಂ–ಜನರಲ್ ನರ್ಸಿಂಗ್ ಮಿಡ್ ವೈಫರಿ) ಮತ್ತು ಅರೆ ವೈದ್ಯಕೀಯ (ಪ್ಯಾರಾ ಮೆಡಿಕಲ್) ಕೋರ್ಸ್ ಗಳಿಗೆ 2021–22ನೇ ಸಾಲಿಗೆ ಸೀಟು ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಪಟ್ಟಿ, ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ಮತ್ತು ಪ್ಯಾರಾ ವೈದ್ಯಕೀಯ ಮಂಡಳಿಯ ವೆಬ್ ಸೈಟ್ ನಿಂದಲೇ ಕಣ್ಮರೆ ಆಗಿದೆ!
ಸರ್ಕಾರಿ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ಸಂಸ್ಥೆಗಳಲ್ಲಿ ಕಡಿಮೆ ಶ್ರೇಯಾಂಕ ಪಡೆದಿರುವ ವಿದ್ಯಾರ್ಥಿಗಳು ಸೀಟು ಗಿಟ್ಟಿಸಿಕೊಂಡಿದ್ದು, ಉನ್ನತ ಶ್ರೇಯಾಂಕ ಪಡೆದವರು ಸೀಟು ವಂಚಿತರಾಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಬೇಜವಾಬ್ದಾರಿಯ ಉತ್ತರ ನೀಡಲಾಗಿದೆ ಎಂದು ಕೆಲವು ಅಭ್ಯರ್ಥಿಗಳು, ಪೋಷಕರು ವೈದ್ಯಕೀಯ ನಿರ್ದೇಶನಾಲಯದ ನಿರ್ದೇಶಕರಿಗೆ ದೂರು ನೀಡಿದ್ದಾರೆ.