ನ್ಯೂಸ್ ನಾಟೌಟ್: ನಾವು ದೇವಸ್ಥಾನಕ್ಕೆ ಬರುವಾಗ ಚಪ್ಪಲಿ ಹೊರಗಿಟ್ಟು ಬರುವ ಹಾಗೆ ರಾಜಕೀಯವನ್ನೂ ಹೊರಗಿಟ್ಟು ಬರಬೇಕು, ದೇವರ ಸನ್ನಿಧಾನದಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಮಹಾಲಿಂಗೇಶ್ವರ ದೇವಳದ `ಅನ್ನಪೂರ್ಣೇಶ್ವರಿ’ ಅನ್ನಛತ್ರದ ನೆಲಮಹಡಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ದೇವಳದ ಅಭಿವೃದ್ಧಿಗೆ ₹50 ಕೋಟಿ ವೆಚ್ಚದ ಸಮಗ್ರ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ. ಈಗಾಗಲೇ ₹2 ಕೋಟಿ ಬಿಡುಗಡೆಯಾಗಿದೆ. ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು. ಪುತ್ತೂರು ಮಹಾಲಿಂಗೇಶ್ವರ ದೇವಳದ ಜತೆಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ಅಭಿವೃದ್ಧಿ ಕೆಲಸವೂ ಆಗಬೇಕು. ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಬರುವ ಯಾತ್ರಾರ್ಥಿಗಳ ಪೈಕಿ ಅರ್ಧದಷ್ಟು ಜನರಾದರೂ ಇಲ್ಲಿಗೆ ಬಂದು ಹೋಗುವಂತಾಗಬೇಕು. ಈ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿದೆ’ ಎಂದರು.
ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಬೆಳಿಗ್ಗೆ ನೂತನ ಅನ್ನಛತ್ರದಲ್ಲಿ ಗಣಪತಿ ಹೋಮ ನಡೆಯಿತು. ನಾನಾ ಬಗೆಯ ವಸ್ತುಗಳನ್ನು ಭಕ್ತರು ಮೆರವಣಿಗೆ ಮೂಲಕ ದೇವಳದಿಂದ ತಂದು ಛತ್ರ ತುಂಬಿಸಿದರು. ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಮಾತನಾಡಿದರು. ಕಳಸೆಗೆ ಅಕ್ಕಿ ಸುರಿದು ಅಕ್ಷಯಕ್ಕಾಗಿ ಪ್ರಾರ್ಥಿಸಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು, ಛನ್ನಛತ್ರಕ್ಕೆ ದೇಣಿಗೆ ನೀಡಿರುವ ಉದ್ಯಮಿ ಪುರುಷೋತ್ತಮ ಶೆಟ್ಟಿ ನುಳಿಯಾಲು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ.ಸುಧಾ ಎಸ್ ರಾವ್, ವೀಣಾ ಬಿ ಕೆ, ಬಿ ಐತ್ತಪ್ಪ ನಾಯ್ಕ , ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು ಮತ್ತಿತರರು ಇದ್ದರು.