ನ್ಯೂಸ್ ನಾಟೌಟ್: ಕಬಡ್ಡಿ ನಮ್ಮ ಮಣ್ಣಿನ ಆಟ. ಈಗೀಗ ಅದು ಮ್ಯಾಟ್ ತನಕ ಬಂದು ಹೈಟೆಕ್ ಸ್ಪರ್ಶ ಪಡಕೊಂಡಿದೆ. ಅದರಲ್ಲೂ ಪ್ರೊ ಕಬಡ್ಡಿ ಆರಂಭವಾದ ಬಳಿಕವಂತೂ ಕಬಡ್ಡಿಯ ಖದರೇ ಬದಲಾಗಿದೆ. ಕೋಟ್ಯಂತರ ವೀಕ್ಷಕರನ್ನು ಹೊಂದಿರುವ ಪ್ರೊ ಕಬಡ್ಡಿ ಹಳ್ಳಿ ಹುಡುಗರಿಗೆ ಅಂತಾರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸಿಕೊಟ್ಟಿದೆ. ಇಂತಹ ಮೆಗಾ ಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೆವಿಜಿ ವಿದ್ಯಾ ಸಂಸ್ಥೆಗಳ ಅಧೀನದಲ್ಲಿರುವ ನೆಹರೂ ಮೆಮೋರಿಯಲ್ ಕಾಲೇಜು (NMC) ಪ್ರತಿಭೆಯೂ ಸ್ಥಾನ ಪಡೆದುಕೊಂಡು ಸುದ್ದಿಯಾಗಿದೆ.
ಹೌದು, ತೆಲುಗು ಟೈಟಾನ್ಸ್ ತಂಡದ ಪರ ಇಲ್ಲಿನ MSW ಸ್ನಾತಕೋತ್ತರ ವಿದ್ಯಾರ್ಥಿ ರತನ್ ಜಿ. ಆಡುವ ಅವಕಾಶ ಪಡೆದುಕೊಂಡಿದ್ದಾರೆ. ರತನ್ ಈ ಹಿಂದೆ ನೆಹರೂ ಮೆಮೋರಿಯಲ್ ಕಾಲೇಜಿನ ಬಿ.ಕಾಂ ಪದವಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ಮಂಗಳೂರು ಯೂನಿವರ್ಸಿಟಿ ತಂಡ ಪ್ರತಿನಿಧಿಸಿದ್ದರು. ಅತ್ಯುತ್ತಮ ರೈಡರ್ ಆಗಿ ಗಮನಾರ್ಹ ಸಾಧನೆ ಮಾಡಿದ್ದರು. ಇದೀಗ ಸಾಧನೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ರತನ್ ಮುಂದಿನ ಪ್ರೊ ಕಬಡ್ಡಿ ಕೂಟದಲ್ಲಿ ಟೈಟಾನ್ಸ್ ಪರ ಮಿಂಚಿನ ಪ್ರದರ್ಶನ ನೀಡುವ ಆತ್ಮವಿಶ್ವಾಸದಲ್ಲಿದ್ದಾರೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಪೋರ್ಟ್ಸ್ ಅಂತ ಬಂದಾಗ ಆಳ್ವಾಸ್ ಮತ್ತು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ನೋಡುತ್ತಿದ್ದೆವು. ಇದೀಗ ಸುಳ್ಯದ KVG ಸ್ಪೋರ್ಟ್ಸ್ ಕ್ಲಬ್ ಕೂಡ ರಾಜ್ಯ, ದೇಶ ಮಟ್ಟದಲ್ಲಿ ಗುರುತಿಸುವಂತಹ ಕ್ರೀಡಾ ಪಟುಗಳನ್ನು ತಯಾರಿ ಮಾಡುತ್ತಿರುವುದು ವಿಶೇಷ. ಸುಳ್ಯದ ಮಟ್ಟಿಗೆ ಇದೊಂದು ಹೆಮ್ಮೆಯ ಸಂಗತಿ. KVG ಸ್ಪೋರ್ಟ್ಸ್ ಕ್ಲಬ್ ಗೆ ನಿರಂತರವಾಗಿ ಪ್ರಾಯೋಜಕತ್ವ ನೀಡಿ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ ಸಿ. ಯುವ ಆಟಗಾರರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ. ಭವಿಷ್ಯದಲ್ಲಿ ದೇಶಕ್ಕೆ ಒಳ್ಳೆಯ ಕ್ರೀಡಾಪಟುಗಳನ್ನು ಕೂಡ ನೀಡಬೇಕು ಅನ್ನುವ ಉದ್ದೇಶದಿಂದ ಅಕ್ಷಯ್ ಕೆ.ಸಿ ಪ್ರಾಯೋಜಕತ್ವ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಲಬ್ ನಿಂದ ಇನ್ನಷ್ಟು ಕ್ರೀಡಾಪಟುಗಳು ಹೊರಬರುವ ನಿರೀಕ್ಷೆ ಇದೆ.