ಕೋಲಾರ: ಪೋಷಕರು ಜಮೀನು ನೀಡದ ಸಿಟ್ಟಿಗೆ ಮನೆಯ ಮಗಳು ಹಾಗೂ ಅಳಿಯ ಸೇರಿಕೊಂಡು ಹಿಪ್ಪು ನೇರಳೆ ಬೆಳೆಗೆ ವಿಷ ಸಿಂಪಡಿಸಿ ಬೆಳೆದ ಬೆಳೆಯನ್ನು ನಾಶ ಮಾಡಿದ ಘಟನೆ ನಡೆದಿದೆ. ಕೋಲಾರ ತಾಲೂಕಿನ ಯಳಚೀಪುರ ಗ್ರಾಮದಲ್ಲಿ ಈ ಹೇಯ ಕೃತ್ಯ ನಡೆದಿದೆ. ಗ್ರಾಮದ ರಾಮಣ್ಣ-ಲಕ್ಷ್ಮಮ್ಮ ಎಂಬ ವೃದ್ದ ದಂಪತಿ ಬೆಳೆದಿದ್ದ ರೇಷ್ಮೆ ಬೆಳೆಯನ್ನು ಅವರ ಮಗಳು ಚೌಡಮ್ಮ ನಾಶ ಮಾಡಿದ್ದಾರೆ.
ಹಿರಿಯ ಮಗಳಾದ ಚೌಡಮ್ಮನಿಗೆ ಜಮೀನು ನೀಡಿಲ್ಲ ಎಂಬ ಕಾರಣಕ್ಕೆ ಹಿಪ್ಪು ನೇರಳೆ ಬೆಳೆಗೆ ವಿಷ ಹಾಕಿದ್ದಾಳೆ ಎಂದು ರಾಮಣ್ಣ-ಲಕ್ಷ್ಮಮ್ಮ ಎಂಬ ವೃದ್ದ ದಂಪತಿ ಆರೋಪ ಮಾಡಿದ್ದಾರೆ. ವಿಷ ಸಿಂಪಡಣೆ ಮಾಡಿದ ಹಿಪ್ಪು ನೇರಳೆ ಸೊಪ್ಪು ತಿಂದು ಚಾಕಿಯಲ್ಲಿದ್ದ ರೇಷ್ಮೆ ಹುಳುಗಳು ಸಾಯುತ್ತಿವೆ. 150 ಮೊಟ್ಟೆಯ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ರೇಷ್ಮೆ ಬೆಳೆ ನಾಶವಾಗಿದೆ. ಸಾಲ ಮಾಡಿ, ಕಷ್ಟಪಟ್ಟು ಜೀವನದೂಡುತ್ತಿದ್ದರೆ ಇದೀಗ ಬಂಗಾರದಂತಹ ರೇಷ್ಮೆ ಬೆಳೆಗೆ ವಿಷ ಹಾಕಿದ್ದಾರೆಂದು ವೃದ್ದ ದಂಪತಿ ಕಣ್ಣೀರು ಹಾಕಿದ್ದಾರೆ.