ನ್ಯೂಸ್ ನಾಟೌಟ್: ಹಿಂದೂ ದೇಗುಲಗಳಿಗೆ ತುಂಡುಡುಗೆ ತೊಟ್ಟು ಬರುವುದನ್ನು ಹಲವರು ವಿರೋಧಿಸಿದ್ದ ಪರಿಣಾಮ ಮತ್ತು ಜಿಲ್ಲಾಧಿಕಾರಿಕೆ ದೂರುಗಳು ಹೋಗಿದ್ದ ಕಾರಣ ಇತ್ತೀಚೆಗೆ ಹಂಪಿಯಲ್ಲಿ ಡ್ರೆಸ್ ಕೋಡ್ ಜಾರಿ ಮಾಡಲಾಗಿತ್ತು. ಆದರೆ ಇದೀಗ ದೇಗುಲಗಳಲ್ಲಿ ವಸ್ತ್ರಸಂಹಿತೆ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಬುಧವಾರ(ಜ.೩೧) ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಬಗ್ಗೆ ಹಿರಿಯ ಸಾಹಿತಿ ಮರುಳಸಿದ್ಧಪ್ಪ ಸಿಎಂ ಮುಂದೆಯೇ ಅಕ್ಷೇಪ ವ್ಯಕ್ತಪಡಿಸಿದ್ದರು. ಮೈತುಂಬಾ ಬಟ್ಟೆ ಹಾಕಿಕೊಂಡು ಹೋಗಬೇಕು ನಿಜ. ಹಾಗಂತ ಮಹಿಳೆಯರು ಸೀರೆ, ಪುರುಷರು ಪಂಚೆ ಉಡಬೇಕು ಅನ್ನೋದು ಯಾಕೆ? ಇದು ಪ್ರಜಾಪ್ರಭುತ್ವ ತತ್ವಕ್ಕೆ ಮಾರಕ ಅಂತಾ ಮರುಳ ಸಿದ್ಧಪ್ಪ ಆಕ್ಷೇಪ ಎತ್ತಿದರು ಎನ್ನಲಾಗಿದೆ.
ಇದಾದ ಬಳಿಕ ವೇದಿಕೆಯಲ್ಲಿಯೇ ಸ್ಪಷ್ಟೀಕರಣ ನೀಡಿದ ಸಿಎಂ, ನಮ್ಮ ಮುಜರಾಯಿ ಇಲಾಖೆ ಈ ತೀರ್ಮಾನ ಮಾಡಿಲ್ಲ. ಇಂಥದ್ದೇ ಡ್ರೆಸ್ ಹಾಕಬೇಡಿ ಅಥವಾ ಹಾಕಿ ಅನ್ನೋದು ತಪ್ಪು. ಶರ್ಟ್, ಪ್ಯಾಂಟ್ ಧರಿಸಿಕೊಂಡು ಹೋಗಬೇಡಿ, ಸೀರೆ ಹಾಕ್ಕೊಂಡು ಹೋಗಿ ಅಂತಾ ಹೇಳೋದು ಸರಿಯಲ್ಲ. ನಾವು ಇಂಥದ್ದೇ ಡ್ರೆಸ್ ಹಾಕಿಕೊಳ್ಳಿ ಅಥವಾ ಬಟ್ಟೆ ಬಿಚ್ಚಾಕ್ಕೊಂಡು ಬನ್ನಿ ಅಂತಾ ಹೇಳಲ್ಲ ಎಂದು ಸಿಎಂ ವಿವಾದಾತ್ಮಕ ಹೇಳಿಕೆ ನೀಡಿದರು.
ಶುದ್ಧ ಮನಸ್ಸಿನಿಂದ ದೇವಸ್ಥಾನಕ್ಕೆ ಹೋಗಬೇಕು, ಶುದ್ಧ ಭಕ್ತಿ ಇಲ್ಲದೇ ಬಟ್ಟೆ ಸರಿಯಾಗಿ ಹಾಕಿಕೊಂಡು ಹೋದರೆ ಏನ್ ಪ್ರಯೋಜನ ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ.