ನ್ಯೂಸ್ ನಾಟೌಟ್:ಬೈಕ್ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಪಂಜದ ಯುವಕನೋರ್ವ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ಹರಿಹರ ಪಲ್ಲತ್ತಡ್ಕ ಸಮೀಪ ಮಲ್ಲಾರ ಎಂಬಲ್ಲಿ ಸ್ಕೂಟರ್ ಅಪಘಾತದಲ್ಲಿ ಯುವಕ ಗಾಯಗೊಂಡಿದ್ದು, ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆ ಹಾಗೂ ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿದಾನಂದ (37ವ) ಮೃತ ಯುವಕನೆಂದು ತಿಳಿದು ಬಂದಿದೆ.ಈತ ಪಂಜ ಸಮೀಪದ ಕೂತ್ಕುಂಜ ಗ್ರಾಮದ ಕಲ್ಕ ಗೋಪಾಲ ಮತ್ತು ಶ್ರೀಮತಿ ದೇವಕಿ ದಂಪತಿ ಪುತ್ರ ಎಂದು ತಿಳಿದು ಬಂದಿದೆ.
ಚಿದಾನಂದ ಅವರು ಜ.30 ರಾತ್ರಿ ಹರಿಹರದ ಕಡೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಈ ವೇಳೆ ಮನೆಗೆ ತೆರಳುತ್ತಿದ್ದಾಗ ಹರಿಹರ ಸಮೀಪ ಮಲ್ಲಾರ ಎಂಬಲ್ಲಿ ಸ್ಕೂಟರ್ ಅಪಘಾತ ಸಂಭವಿಸಿದೆ. ಇದೇ ವೇಳೆ ಅದೇ ಮಾರ್ಗವಾಗಿ ವಾಹನವೊಂದರಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ ಆ್ಯಂಬುಲೆನ್ಸ್ ನಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಅವರ ಮನೆಯವರಿಗೆ ತಿಳಿಸಿದ್ದಾರೆ. ರಾತ್ರಿ ಮನೆಯವರು ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಈ ವೇಳೆ ಚಿದಾನಂದ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಜ.೩೧ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಂದೆ, ತಾಯಿ,ಪತ್ನಿ,ಪುತ್ರ, ಸಹೋದರಿಯರು ಸೇರಿದಂತೆ ಕುಟುಂಬಸ್ಥರನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.