ನ್ಯೂಸ್ ನಾಟೌಟ್ :ಜೀರಿಗೆ ಮೆಣಸು ಹೆಚ್ಚು ಆರೈಕೆ ಇಲ್ಲದೇ ಅಧಿಕ ಖಾರ ಹೊಂದಿರುವ ಚಿಕ್ಕ ಚಿಕ್ಕ ಮೆಣಸು.ಇದಕ್ಕೆ ಇದೀಗ ಬಾರಿ ಬೇಡಿಕೆ ಬಂದಿದ್ದು, ಇದನ್ನು ನಾನಾ ಹೆಸರುಗಳಿಂದ ಜೀರಿಗೆ ಮೆಣಸು,ಸೂಜಿ ಮೆಣಸು,ಕಾಗೆ ಗಾಂಧಾರಿ,ಕಾಗೆ ಮೆಣಸು ,ಪರ್ ಡೇ ಚಿಲ್ಲಿ ಎಂದೆಲ್ಲ ಕರೆಯುತ್ತಾರೆ.
ಅಡಿಕೆ ತೋಟದಲ್ಲಿ ಮನೆ ಹತ್ತಿರ ಇದನ್ನು ಕಾಣಬಹುದು,ಮಾತ್ರವಲ್ಲ ಅತೀ ಸುಲಭವಾಗಿ ಬೆಳೆಯುವ ಬೆಳೆಯೂ ಕೂಡ.ಆದರೆ ವಿಪರ್ಯಾಸವೆಂದ್ರೆ ಕಳೆನಾಶಕ ಯಂತ್ರಗಳ ಮುಖಾಂತರ ಕಳೆ ತೆಗೆಯುವಾಗ ಇದೀಗ ಈ ಗಿಡಗಳು ನಾಶವಾಗುತ್ತಿದ್ದು, ತೀರಾ ಅಪರೂಪವಾಗಿ ಬಿಟ್ಟಿದೆ. ಮನೆ ಹಿತ್ತಲಲ್ಲಿ ಬೆಳೆಯುವ ಈ ಮೆಣಸು ಗರಿಷ್ಠ ಔಷಧೀಯ ಗುಣ ಹೊಂದಿದೆ.ಗಾಂಧಾರಿ ಮೆಣಸಿನ ಜ್ಯೂಸ್ ಆರೋಗ್ಯಕ್ಕೂ ಉತ್ತಮ.ಇದರ ಜೊತೆಗೆ ಹೊಟ್ಟೆ ಉಬ್ಬರಿಸುವುದು, ಅಜೀರ್ಣ, ಸಂಧಿವಾತ ನಿವಾರಿಸುವ ಗಾಂಧಾರಿಯು ಕೊಲೆಸ್ಟ್ರಾಲ್, ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗಾಂಧಾರಿ ಮೆಣಸಿನ ರಸವು ಕ್ಷಾರಯುಕ್ತವಾಗಿದೆ. ಇದು ಜಠರ ಮತ್ತು ಕರುಳುಗಳ ಕಾರ್ಯವನ್ನು ವೃದ್ದಿಸುತ್ತದೆ. ಜೊತೆಗೆ ಆಗಾಗ ಕಂಡು ಬರುವಂತಹ ಎಸಿಡಿಟಿಯನ್ನು ಕೂಡಾ ಇದು ದೂರ ಮಾಡುತ್ತದೆ.
ಇತ್ತೀಚೆಗೆ ಇದರ ಪ್ರಯೋಜನ ಅರಿತು ಜನ ಸಭೆ ಸಮಾರಂಭಗಳಲ್ಲೂ ಇದರ ಬಳಕೆಯನ್ನು ಮಾಡುತ್ತಿದ್ದಾರೆ. ಲಿಂಬೆ ಜೊತೆ ಉಪ್ಪಿನಕಾಯಿಯಲ್ಲೂ ಇದರ ಬಳಕೆಯಾಗುತ್ತದೆ.ಪೇಟೆ ಪಟ್ಟಣದಲ್ಲಿ ಸಿಗುವ ಮೆಣಸು ಆರೋಗ್ಯಕ್ಕೂ ಅಹಿತಕರ. ಹೀಗಾಗಿ ಇಲ್ಲದ ಕಾಯಿಲೆಗೆ ಒಳಗಾಗುತ್ತಿದ್ದೇವೆ ಎಂಬ ಅರಿವು ಇದೀಗ ನಮಗೆ ಬಂದಿದೆ. ನಮ್ಮ ಹಿಂದಿನವರು ಅನಾದಿ ಕಾಲದಿಂದಲೇ ಗಾಂಧಾರಿ ಮೆಣಸು ಬಳಕೆ ಮಾಡುತ್ತಿದ್ದು,ಬಾಯಿಗೆ ಖಾರವಾದರೂ, ಉದರಕ್ಕೆ ಇದು ತುಂಬಾ ಸಿಹಿಯೆನಿಸಿದೆ.
ನಮ್ಮ ಹೊಟ್ಟೆಯನ್ನು ಪಾನಿಪೂರಿ, ಪಿಜ್ಜಾ,ಬರ್ಗರ್ ಎಂದೆಲ್ಲ ತಿಂದು ಕಸದ ತೊಟ್ಟಿಗಿಂತಲು ಕೀಳಾಗಿಸಿದ್ದೇವೆ. ಆದ್ದರಿಂದಲೇ ನಮ್ಮ ದೇಹ ಇಂದು ಕಾಯಿಲೆಗಳ ಫ್ಯಾಕ್ಟರಿ ಆಗಿದ್ದು, ಎಚ್ಚೆತ್ತುಕೊಂಡರೆ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಬಾಯಿಗೆ ರುಚಿಸುವುದೆಲ್ಲ ಆರೋಗ್ಯಕ್ಕೆ ಉತ್ತಮವಲ್ಲ, ಹಾಗಲಕಾಯಿ ಬಾಯಿಗೆ ಕಹಿಯಾದರೂ ಉದರಕ್ಕೆ ಸಿಹಿ ಎಂಬಂತೆ ಈ ಮೆಣಸು ಬಾಯಿಗೆ ಖಾರವಾದರೂ ಹೊಟ್ಟೆಗೆ ತಂಪೆನಿಸಿದೆ.
ಈ ಗಿಡ ಒಂದು ಬೆಳೆದರೆ ಸಾಕು.ಇದರ ಹಣ್ಣನ್ನು ಕಾಗೆಗಳು ತಿಂದು ಬೀಜ ಪ್ರಸಾರ ಮಾಡುತ್ತವೆ.ಅಲ್ಲಲ್ಲಿ ಗಿಡಗಳು ತನ್ನಿಂದ ತಾನೇ ಹುಟ್ಟಿ ಬೆಳೆಯುತ್ತವೆ.ಯಾರು ಇದನ್ನು ಕೃಷಿ ಮಾಡುವುದಿಲ್ಲ, ಮಾಡಬೇಕಾದ ಅವಶ್ಯಕತೆಯೂ ಇಲ್ಲ.ಇದು ತನ್ನಿಂದ ತಾನೇ ಬೆಳೆದುಕೊಂಡು ಹೋಗುತ್ತದೆ.ಇನ್ನು ಈ ಹಣ್ಣನ್ನು ಕೊಯ್ದು ಒಣಗಿಸಿ ಮಾರಾಟ ಮಾಡಿದರೆ ಕೆಜಿಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ಧಾರಣೆ ಇದೆ.
ಚಿತ್ರ-ಬರಹ :ಕುಮಾರ್ ಪೆರ್ನಾಜೆ ,ಪುತ್ತೂರು