ನ್ಯೂಸ್ ನಾಟೌಟ್ : ಭದ್ರತೆ, ಸುರಕ್ಷತೆ ವಿಷಯದಲ್ಲಿ ಜೋಕ್ ಮಾಡಿದರೆ ಅದು ತಮಾಷೆಯಲ್ಲ ಬದಲಿಗೆ ಶಿಕ್ಷಾರ್ಹ ಅಪರಾಧ ಇಂತಹ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಆತ ಬೆಂಗಳೂರು ವಿಮಾನ ನಿಲ್ದಾಣದಿಂದ ಕೊಚ್ಚಿನ್ಗೆ ತೆರಳುತ್ತಿದ್ದ. ವಿಮಾನ ನಿಲ್ದಾಣದ ತಪಾಸಣೆ ಅಧಿಕಾರಿಗಳು ಆತನನ್ನು ಒಳಗೆ ಬಿಡುವ ಮುಂಚೆ ಚೆಕ್ಕಿಂಗ್ ನಡೆಸಲು ಮುಂದಾದರು. ಆಗ ಆತ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ತಮಾಷೆ ಮಾಡಿದ್ದ. ಮುಂದೆ ಅವನಿಗೆ ಎದುರಾದದ್ದು ಬಿಗಿಯಾದ ತಪಾಸಣೆ. ಆತ ತಾನು ತಮಾಷೆಗೆ ಹೇಳಿದ್ದು ಎಂದು ಹೇಳಿದರೂ ಕೇಳಿಸಿಕೊಳ್ಳಲು ಯಾರು ತಯಾರಿರಲಿಲ್ಲ.
ಈ ರೀತಿ ಸಿಕ್ಕಾಕಿಕೊಂಡ ಪ್ರಯಾಣಿಕನ ಹೆಸರು ಸಜ್ಜು ಕುಮಾರ್. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಆತ ತನ್ನ ಊರಾದ ಕೇರಳಕ್ಕೆ ಹೋಗುತ್ತಿದ್ದ. ವಿಮಾನ ನಿಲ್ದಾಣ ಪ್ರವೇಶಿಸುವಾಗ ಮಾಡುವ ತಪಾಸಣೆಯಿಂದ ಆತ ಕಿರಿಕಿರಿ ಅನುಭವಿಸಿದ್ದ. ಏನಿದೆ ಬ್ಯಾಗ್ನಲ್ಲಿ ಎಂದು ತಪಾಸಣೆ ಮಾಡುವ ಅಧಿಕಾರಿಗಳು ಕೇಳಿದ್ದರು. ಆಗ ಇವನು ತಮಾಷೆಗೆ ʻಬಾಂಬ್ ಇದೆʼ ಎಂದಿದ್ದ.
ಬಾಂಬ್ ಎಂಬ ಶಬ್ದ ಕೇಳುತ್ತಿದ್ದಂತೆಯೇ ಅಲರ್ಟ್ ಆದ ಅಧಿಕಾರಿಗಳು ಕೂಡಲೇ ಆತನ ಬ್ಯಾಗ್ ಮತ್ತು ಆತನನ್ನು ಒಳಗೆ ಕರೆದುಕೊಂಡು ಹೋದರು. ತೀವ್ರ ತಪಾಸಣೆ ಮಾಡಿದ ವೇಳೆ ಬ್ಯಾಗ್ನಲ್ಲಿ ಬೇರೆ ಏನೂ ಪತ್ತೆಯಾಗಿರಲಿಲ್ಲ. ಅಧಿಕಾರಿಗಳ ಜತೆ ಉದ್ಧಟತನದಿಂದ ವರ್ತಿಸಿ, ತಪ್ಪು ಹಾದಿಗೆ ಎಳೆದ ಸಜ್ಜು ಕುಮಾರ್ನನ್ನು ಈಗ ಬಂಧಿಸಲಾಗಿದೆ. ವಿಮಾನ ನಿಲ್ದಾಣ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.