ನ್ಯೂಸ್ ನಾಟೌಟ್: ಭಾರತದ ವಿರುದ್ಧ ಮುಸುಕಿನ ಸಮರ ಸಾರಿದ್ದ ಮಾಲ್ದೀವ್ಸ್ ಅಧ್ಯಕ್ಷ (Maldives president) ಮೊಹಮ್ಮದ್ ಮುಯಿಜುಗೆ ಮುಜುಗರ ತರಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ (Viral video), ಮಾಲ್ದೀವ್ಸ್ ಸಂಸತ್ತಿನಲ್ಲಿ ಎಂಪಿಗಳು ಗುದ್ದಾಡಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಸೂಟ್ ಧರಿಸಿಕೊಂಡ ಎಂಪಿಗಳು ಒಬ್ಬರಿನ್ನೊಬ್ಬರ ಮೇಲೆ ಬಿದ್ದು ಹುಚ್ಚರಂತೆ ಗುದ್ದಾಡಿಕೊಂಡಿದ್ದಾರೆ. ಪರಸ್ಪರ ಪಂಚ್, ಕಿಕ್ ಮಾಡಿ, ತಳ್ಳಾಡಿಕೊಂಡು, ಉರುಳಿಬಿದ್ದಿದ್ದಾರೆ. ನೋಡುಗರು ಇದೇನು ಸಂಸತ್ತೋ ಬಾಕ್ಸಿಂಗ್ ರಿಂಗೋ ಎಂದು ಕೇಳುವಂತಾಗಿದೆ.
ಮೊಹಮ್ಮದ್ ಮುಯಿಜು ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಮಾಲ್ದೀವ್ಸ್ ಸಂಸತ್ತು ಈ ಕಿತ್ತಾಟಕ್ಕೆ ಸಾಕ್ಷಿಯಾಯಿತು.
ಗುದ್ದಾಡಿಕೊಂಡ ಎಂಪಿಗಳಲ್ಲಿ ಇಬ್ಬರು ಪ್ರತಿಪಕ್ಷ ಮಾಲ್ದೀವಿಯನ್ ಡೆಮೊಕ್ರಾಟಿಕ್ ಪಾರ್ಟಿಯ (ಎಂಡಿಪಿ) ಇಸ್ಸಾ ಹಾಗೂ ಆಡಳಿತ ಪಕ್ಷ ಪಿಎನ್ಸಿಯ ಅಬ್ದುಲ್ಲಾ ಶಾಹೀಂ ಅಬ್ದುಲ್ ಹಕೀಂ ಎಂದು ಗೊತ್ತಾಗಿದೆ.
ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರ ಸಂಪುಟದ ಮೂವರು ಸದಸ್ಯರು ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ ಸಂದರ್ಭದಲ್ಲಿ ಅಪಹಾಸ್ಯದ, ಅವಹೇಳನದ ಮಾತನಾಡಿದ್ದರು. ಇದರಿಂದ ಭಾರತದ ಜನತೆ ಮಾತ್ರವಲ್ಲ, ಸ್ವತಃ ಮಾಲ್ದೀವ್ಸ್ ಜನತೆಯೂ ಸಿಟ್ಟಿಗೆದ್ದು ಛೀಮಾರಿ ಹಾಕಿದ್ದರು.