ನ್ಯೂಸ್ ನಾಟೌಟ್:ಕೊಡಗು ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳಿಂದಾಗಿ ರೈತರು ಕಂಗಾಲಾಗಿರುವುದರ ಬಗ್ಗೆ ಆಗಾಗ್ಗೆ ವರದಿಯಾಗುತ್ತಲೇ ಇದೆ.ಇದೀಗ ಆ ವ್ಯಾಪ್ತಿಯ ಪೆರಾಜೆ ಗ್ರಾಮದಲ್ಲಿ ಒಂಟಿ ಸಲಗವೊಂದು ಕಾಣ ಸಿಕ್ಕಿದ್ದು ಜನರು ಆತಂಕಗೊಂಡಿರುವ ಘಟನೆ ಬಗ್ಗೆ ವರದಿಯಾಗಿದೆ.
ಇತ್ತೀಚೆಗಷ್ಟೇ ಅರಂತೋಡು ಭಾಗದಲ್ಲಿಯೂ ಕಾಡಾನೆ ಪ್ರತ್ಯಕ್ಷಗೊಂಡು ಅಲ್ಲಿನ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು.ಬಳಿಕ ಸಂಪಾಜೆ,ಮಂಡೆಕೋಲು,ಮರ್ಕಂಜ ಗ್ರಾಮದಲ್ಲಿಯೂ ಕಾಡು ಪ್ರಾಣಿಗಳ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದರು.ಮಾತ್ರವಲ್ಲ ಸುಳ್ಯ ತಾಲೂಕಿನ ವಿವಿಧೆಡೆಗಳಲ್ಲಿಯೂ ಕಾಡು ಪ್ರಾಣಿಗಳ ಉಪಟಳ ಜೋರಾಗಿದೆಯೆಂಬ ದೂರು ಕೇಳಿ ಬರುತ್ತಿದ್ದವು.ಇದೀಗ ಒಂಟಿಸಲಗವೊಂದು ಪೆರಾಜೆ ಗ್ರಾಮದಲ್ಲಿ ಸುತ್ತಾಡಿರುವ ಬಗ್ಗೆ ವರದಿಯಾಗಿದೆ.
ಪೆರಾಜೆಯ ಬಿಳಿಯಾರಿನಲ್ಲಿ ನಿಂತಿದ್ದ ಓಮ್ನಿ ಕಾರಿಗೆ ಹಾನಿ ಮಾಡಿ ತೆರಳಿರುವ ಘಟನೆ ಸಂಭವಿಸಿದ್ದು,ದೊಡ್ಡಡ್ಕದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಒಮ್ನಿ ಕಾರಿಗೆ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.ಬೆಳಗ್ಗಿನ ಜಾವ 8.30 ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.
ಇನ್ನು ಈ ವಿಚಾರ ಕ್ಷಣ ಮಾತ್ರದಲ್ಲೇ ಊರೆಲ್ಲ ಹಬ್ಬಿತ್ತು. ಬೆಳಗ್ಗೆ 8.30 ಕ್ಕೆ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೊರಡೋ ಹೊತ್ತಾಗಿರೋದ್ರಿಂದ ವಿದ್ಯಾರ್ಥಿಗಳು ಈ ವಿಷಯ ತಿಳಿದು ಆತಂಕದಲ್ಲೇ ಇದ್ದರು. ಕೆಲವು ವಿದ್ಯಾರ್ಥಿಗಳು ಇದೇ ಭಾಗದಿಂದಾಗಿಯೇ ಶಾಲೆಗೆ ಹೋಗುವುದರಿಂದಾಗಿ ತಕ್ಷಣ ವಾಟ್ಸಾಪ್ ಮೂಲಕ ಆನೆ ಬಂದಿರುವ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಸಂದೇಶವನ್ನು ರವಾನಿಸಲಾಗಿತ್ತು.ಇದರಿಂದಾಗಿ ಯಾರಿಗೂ ಯಾವುದೇ ರೀತಿಯ ಅಪಾಯಗಳಾಗಿಲ್ಲವೆಂದು ತಿಳಿದು ಬಂದಿದೆ.ಕಾಡಾನೆಯು ಗ್ರಾಮದ ಪೀಚೆ, ಕುಂಡಾಡು, ನಿಡ್ಯಮಲೆ, ಕುಂಬಳಚೇರಿ ಸುತ್ತಾಡಿ ತೆರಳಿದೆಯೆಂಬ ಮಾಹಿತಿ ಲಭ್ಯವಾಗಿದೆ.