ನ್ಯೂಸ್ ನಾಟೌಟ್: ಅಮೆರಿಕ ಸೇನೆಯ ಮೇಲೆ ಡ್ರೋನ್ ದಾಳಿ ನಡೆದಿದ್ದು, ಮೂರು ಸೈನಿಕರು (American Soldiers) ಸಾವನ್ನಪ್ಪಿದ ಘಟನೆ ಸಿರಿಯಾ ಗಡಿ (Syrian Border) ಸಮೀಪದಲ್ಲಿರುವ ಈಶಾನ್ಯ ಜೋರ್ಡಾನ್ನಲ್ಲಿ ನಡೆದಿದೆ.
ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಇದರಿಂದ ಕೆಂಡಾಮಂಡಲವಾದ ಯುಎಸ್ ಅಧ್ಯಕ್ಷ ಜೋ ಬೈಡನ್ (Joe Biden) ಪ್ರತಿದಾಳಿಯ ಸುಳಿವು ಕೊಟ್ಟಿದ್ದಾರೆ.
ಹಮಾಸ್ನೊಂದಿಗೆ ಇಸ್ರೇಲ್ನಲ್ಲಿ ಯುದ್ಧ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಮಧ್ಯಪ್ರಾಚ್ಯದಲ್ಲಿ ಯುಎಸ್ ಮಿಲಿಟರಿ ಸಿಬ್ಬಂದಿಯನ್ನು ನೇರವಾಗಿ ಗುರಿಯಾಗಿಸಲಾಗಿದೆ. ಹಮಾಸ್ ವಕ್ತಾರ ಸಮಿ ಅಬು ಝಹ್ರಿ ಮಾತನಾಡಿ, ಈ ದಾಳಿಯು ಅಮೆರಿಕದ ಆಡಳಿತಕ್ಕೆ ನೀಡಿರುವ ಎಚ್ಚರಿಕೆಯ ಸಂದೇಶವಾಗಿದೆ ಎಂದಿದ್ದಾರೆ.
ಇದು ಇರಾನ್ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ ಆಗಿದೆ. ದಾಳಿಯಲ್ಲಿ ನಮ್ಮ ಮೂವರು ಸೈನಿಕರು ಮರಣ ಹೊಂದಿದ್ದಾರೆ. ಇದಕ್ಕೆ ತಕ್ಕ ಉತ್ತರ ಅಮೆರಿಕ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೈಡನ್ ಹೇಳಿಕೆಗೆ ಇರಾನ್ ಬೆಂಬಲಿತ ರಾಷ್ಟ್ರಗಳ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ.