ನ್ಯೂಸ್ ನಾಟೌಟ್ : ಹೆಚ್ಚಿನವರಿಗೆ ಚಾರಣ ಹೊಗೋದು ಅಂದ್ರೆ ತುಂಬಾ ಇಷ್ಟ.ಅದರಲ್ಲೂ ಸಿಟಿಯಲ್ಲಿರುವವರು ಇಂತಹ ಸ್ಥಳಗಳಿಗೆ ತೆರಳಿ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳಲು ಕಾತುರರಾಗಿರುತ್ತಾರೆ.ಆದರೆ ಸದ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರ ಪರ್ವತಕ್ಕೆ ಭಾರಿ ಸಂಖ್ಯೆಯಲ್ಲಿ ಚಾರಣಿಗರು ಕಂಡು ಬಂದಿದ್ದಾರೆ. ಸರಣಿ ರಜೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಸಮೀಪವಿರುವ ಕುಮಾರಪರ್ವತ ಚಾರಣಕ್ಕೆ ಚಾರಣಿಗರ ದಂಡೇ ಹರಿದು ಬಂದಿದ್ದು ವಿಶೇಷವೆಂಬಂತಿತ್ತು.
ಇವಿಷ್ಟು ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು ಶ್ರೀ ದುರ್ಗಾಪರಮೇಶ್ವರೀ, ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮುಕಾಂಬಿಕಾ ಸಹಿತ ಬಹುತೇಕ ಹೆಚ್ಚಿನ ದೇವಸ್ಥಾನಗಳಿಗೆ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.
ಕುಮಾರ ಪರ್ವತ ಚಾರಣಕ್ಕೆ ವರ್ಷಂಪ್ರತಿ ಈ ಸಮಯದಲ್ಲಿ ಹೆಚ್ಚಿನ ಚಾರಣಿಗರು ಆಗಮಿಸುತ್ತಾರೆ. ಶುಕ್ರವಾರದಿಂದ ರವಿವಾರದ ವರೆಗೆ ಸರಣಿ ರಜೆ ಇರುವುದರಿಂದ ಪ್ರಸ್ತುತ ಭಾರೀ ಸಂಖ್ಯೆಯ ಚಾರಣಿಗರು ಕುಮಾರ ಪರ್ವತ ಚಾರಣಕ್ಕೆ ಆಗಮಿಸಿದ್ದಾರೆ. ಸುಬ್ರಹ್ಮಣ್ಯದ ದೇವರಗದ್ದೆ ಪ್ರವೇಶ ದ್ವಾರದ ಬಳಿ ಶುಕ್ರವಾರ ಭಾರೀ ದಟ್ಟನೆ ಕಂಡುಬಂದಿದೆ.ಸಾಮಾನ್ಯ ರಜೆ ದಿನಗಳಿಂದಲೂ ಹೆಚ್ಚಿನ ಚಾರಣಿಗರು ಆಗಮಿಸಿದ್ದರಿಂದ ದಟ್ಟಣೆ ಉಂಟಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿಯೇ ತೆರಳಲು ಅವಕಾಶ ನೀಡಿದ್ದಾರೆ.