ನ್ಯೂಸ್ ನಾಟೌಟ್ : ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಬೇಕು,ಅವರಲ್ಲಿ ಅಡಗಿರುವ ಪ್ರತಿಭೆಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟಾಗಬಾರದು ಎನ್ನುವ ಸದುದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶೇಷ ಪ್ರಾಮುಖ್ಯತೆಯನ್ನೇ ನೀಡುತ್ತಾರೆ.ಈ ಹಿನ್ನಲೆಯಲ್ಲಿ ಅವರ ವಿನೂತನ ಕಾರ್ಯಕ್ರಮಗಳಲ್ಲಿ “ಪರೀಕ್ಷಾ ಪೇ ಚರ್ಚಾ-7” ಕಾರ್ಯಕ್ರಮ ಕೂಡ ಸೇರಿಕೊಂಡಿದೆ.ಇದೀಗ ವೈಜ್ಞಾನಿಕ ಮಾದರಿಯನ್ನು ಪ್ರದರ್ಶಿಸಲು ಜವಾಹರ್ ನವೋದಯ ವಿದ್ಯಾಲಯ ಮುಡಿಪು ಇಲ್ಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸುಳ್ಯದ ಅಚಲ್ ಬಿಳಿನೆಲೆ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿ..!
ಹೌದು, ಜನವರಿ 29ರಂದು ನವದೆಹಲಿಯ ಭಾರತ್ ಮಂಟಪ (2023ರ G 20 ಶೃಂಗ ಸಭೆ ನಡೆದ ಸ್ಥಳ) ದಲ್ಲಿ ನಡೆಯುವ “ಪರೀಕ್ಷಾ ಪೇ ಚರ್ಚಾ -7“ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರೊಂದಿಗೆ ದೇಶದ ಆಯ್ದ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ನಿರ್ವಹಣೆಯ ಸಂವಾದದಲ್ಲಿ ಈ ವಿದ್ಯಾರ್ಥಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಇಡೀ ದೇಶವೇ ಹೆಮ್ಮೆ ಪಡುವಂತಹ ಹಾಗೂ ನಮ್ಮ ಭಾರತದ ಕೀರ್ತಿ ಪತಾಕೆಯನ್ನು ಜಗದಗಲ ಫಸರಿಸುವಂತೆ ಮಾಡಿದ ಇಸ್ರೋ ಸಾಧನೆಯಾದ “ಚಂದ್ರಯಾನ -3” ಇದರ ಕಾರ್ಯವೈಖರಿಯನ್ನೂ ಹಾಗೂ ಜನಸಾಮಾನ್ಯರಿಗೆ ಅರ್ಥವಾಗುವಂತೆ ತಯಾರಿಸಿದ ವೈಜ್ಞಾನಿಕ ಮಾದರಿಯನ್ನು ಅಚಲ್ ಬಿಳಿನೆಲೆ ಪ್ರಧಾನಿಯವರ ಮುಂದೆ ಪ್ರದರ್ಶಿಸಿ ವಿವರಿಸಲಿದ್ದಾರೆ.
ದೇಶದ 600ಕ್ಕೂ ಹೆಚ್ಚು ಜವಾಹರ್ ನವೋದಯ ವಿದ್ಯಾಲಯಗಳ ಪೈಕಿ ಎಂಟು ವಿದ್ಯಾಲಯಗಳಿಗೆ ಈ ಅವಕಾಶ ದೊರಕಿದ್ದು, ಇದರಲ್ಲಿ ಭಾಗವಹಿಸಲು ನವೋದಯ ವಿದ್ಯಾಲಯದ ಹೈದರಾಬಾದ್ ರೀಜನ್ ನ್ನು ಪ್ರತಿನಿಧಿಸುತ್ತಿರುವ ಅಚಲ್ ಬಿಳಿನೆಲೆಯವರು ಜನವರಿ 22ರಂದು ದೆಹಲಿಗೆ ತೆರಳಿದ್ದಾರೆ.
ಕರಾಟೆಯಲ್ಲಿ ಬ್ಲಾಕ್ ಬೆಲ್ಟ್, ಕೀಬೋರ್ಡ್ ನಲ್ಲಿ ಜೂನಿಯರ್ ಮುಗಿಸಿರುವ ಅಚಲ್ ಬಿಳಿನೆಲೆಯವರು ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರುಗಳಾದ ಚಂದ್ರಶೇಖರ ಬಿಳಿನೆಲೆ ಮತ್ತು ಡಾ.ಅನುರಾಧಾ ಕುರುಂಜಿಯರ ಪುತ್ರ. ರೋಟರಿ ಆಂಗ್ಲ ಮಾದ್ಯಮ ಶಾಲೆಯ ಹಿರಿಯ ವಿದ್ಯಾರ್ಥಿ.