ನ್ಯೂಸ್ ನಾಟೌಟ್:ಕೊಳ್ತಿಗೆ ಗ್ರಾಮದ ಷಣ್ಮುಖ ದೇವ ಪ್ರೌಢಶಾಲೆಯಿಂದ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ.ಸುಮಾರು 14,500 ರೂ. ನಗದು ಸೇರಿದಂತೆ ಕಂಪ್ಯೂಟರ್ ಪರಿಕರಗಳು, ಮೈಕ್ ಸೆಟ್, ಸ್ಪೀಕರ್, ಚಾರ್ಜರ್ ಲೈಟ್ ಮತ್ತಿತರ ಸೊತ್ತುಗಳು ಕಳವು ಆಗಿವೆ ಎಂದು ತಿಳಿದು ಬಂದಿದೆ.
ಶಾಲೆಗೆ ರಜೆ ಇರೋ ಹಿನ್ನಲೆಯಲ್ಲಿ ಜ.22 ರಂದು ಶಾಲೆಗೆ ಬಂದಿರದ ಕಾರಣ ಅಂದು ಶಾಲೆಯ ಬಾಗಿಲಿನ ಬೀಗ ಮುರಿದು ಕಳ್ಳರು ಒಳ ಪ್ರವೇಶಿಸಿದ್ದಾರೆ.ಮರು ದಿನ ಬೆಳಗ್ಗೆ ಶಾಲಾ ಶಿಕ್ಷಕರಾದ ಅನಿರುದ್ಧ ಮತ್ತು ವೀಣಾಕುಮಾರಿಯವರು ಶಾಲೆಗೆ ಬಂದಾಗ ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ಬೀಗವನ್ನು ಯಾವುದೋ ಸಾಧನದಿಂದ ಯಾರೋ ಮುರಿದಿರುವುದು ಕಂಡು ಬಂದಿದೆ.
ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ಬೀಗವನ್ನು ಅಪರಿಚಿತ ಕಳ್ಳರು ಕಳವುಗೈದಿದ್ದು, ಮುಖ್ಯ ಶಿಕ್ಷಕರ ಕಛೇರಿಯಲ್ಲಿದ್ದ 46,000/- ರೂಪಾಯಿ ಬೆಲೆ ಬಾಳುವ 1 ಕಂಪ್ಯೂಟರ್ ಮತ್ತು ಮೋನಿಟರ್ ಹಾಗೂ 2 ಕಬ್ಬಿಣದ ಕಪಾಟುಗಳಲ್ಲಿದ್ದ 14,500/- ರೂಪಾಯಿ ನಗದು ಹಣ, ಅಂದಾಜು 1,500/- ರೂಪಾಯಿ ಬೆಲೆ ಬಾಳುವ 1 ಚಾರ್ಜರ್ ಲೈಟ್, ಒಟ್ಟು 6000/-ರೂಪಾಯಿ ಮೌಲ್ಯದ 2 ಕಾರ್ಡ್ ಲೆಸ್ ಮೈಕ್, ಅಂದಾಜು 5000/- ರೂಪಾಯಿ ಬೆಲೆ ಬಾಳುವ 1 ಸ್ಪೀಕರ್ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ. ಕಳವಾಗಿರುವ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 73,000/- ಆಗಬಹುದು ಎಂಬುದಾಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ಎಸ್.ರವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.