ನ್ಯೂಸ್ ನಾಟೌಟ್ : ರಾಮಾಯಣದ ಕಥೆ ಓದಿದವರಿಗೆ ಕೇಳಿದವರಿಗೆ ಹನುಮಂತ ಭಗವಾನ್ ಶ್ರೀರಾಮನ ನಿಷ್ಠಾವಂತ ಭಕ್ತಿ ಬಗ್ಗೆ ತಿಳ್ಕೊಂಡಿರ್ತೀರಿ.ಎಲ್ಲಿ ರಾಮನೋ ಅಲ್ಲಿ ಹನುಮ ಇದ್ದೇ ಇರುತ್ತಾನೆ ಎನ್ನುವುದು ಭಕ್ತರ ನಂಬಿಕೆ. ಇದೀಗ ಇಂತಹ ನೈಜ ಘಟನೆ ಬಗ್ಗೆ ವರದಿಯಾಗಿದೆ.ಹೌದು,ಈ ನಂಬಿಕೆ ನಿಜವಾಗಿಸುವಂತೆ ಅಯೋಧ್ಯೆ ರಾಮ ಮಂದಿರದೊಳಗೆ (Ram Mandir) ಕೋತಿಯೊಂದು ಪ್ರವೇಶಿಸಿ, ರಾಮನನ್ನು ಕಣ್ತುಂಬಿಕೊಂಡು ಮರಳಿದೆ ಎನ್ನುವ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ (Viral News).
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಂಚಿಕೊಂಡ ಪೋಸ್ಟ್ನಲ್ಲಿ ಈ ವಿಶೇಷತೆ ಬಗ್ಗೆ ಹಂಚಿಕೊಳ್ಳಲಾಗಿದೆ.ಈ ಅದ್ಭುತ ಸಂದರ್ಭದ ಬಗ್ಗೆ ವಿವರಿಸಿದ ಟ್ರಸ್ಟ್ ಮಂಗಳವಾರ (ಜನವರಿ 23) ಸಂಜೆ ಗರ್ಭಗುಡಿಗೆ ಪ್ರವೇಶಿಸಿದ ಕೋತಿ ಭಗವಾನ್ ರಾಮನ ಉತ್ಸವ ವಿಗ್ರಹದ ಬಳಿ ತೆರಳಿತ್ತು ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ತಿಳಿಸಿದೆ. ದಕ್ಷಿಣ ದ್ವಾರದ ಮೂಲಕ ಈ ಕೋತಿ ಗರ್ಭಗುಡಿಯನ್ನು ಪ್ರವೇಶಿಸಿ ರಾಮ ಲಲ್ಲಾ ವಿಗ್ರಹದ ಬಳಿ ಹೋಗಿದೆ ಎಂದು ಹೇಳಿದೆ. ಇದನ್ನು ನೋಡಿದ ಭದ್ರತಾ ಸಿಬ್ಬಂದಿ, ಕೋತಿ ವಿಗ್ರಹವನ್ನು ನೆಲದ ಮೇಲೆ ಬೀಳಿಸಬಹುದು ಎಂಬ ಆತಂಕದಿಂದ ಅದರ ಕಡೆಗೆ ಧಾವಿಸಿದ್ದರು. ಆದರೆ ಹಾಗೇನು ನಡೆಯಲಿಲ್ಲ ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ.
ʼʼಪೊಲೀಸರು ಕೋತಿಯ ಕಡೆಗೆ ಓಡುತ್ತಿದ್ದಂತೆ ಅದು ಶಾಂತವಾಗಿ ಉತ್ತರ ದ್ವಾರದ ಕಡೆಗೆ ತೆರಳಿತು. ಆ ಗೇಟ್ ಮುಚ್ಚಿದ್ದರಿಂದ ಪೂರ್ವದ ಕಡೆಗೆ ಚಲಿಸಿತು ಮತ್ತು ಜನಸಮೂಹದ ನಡುವೆ ಹಾದುಹೋಯಿತು. ಯಾರಿಗೂ ಯಾವುದೇ ತೊಂದರೆ ನೀಡಲಿಲ್ಲʼʼ ಎಂದು ಟ್ರಸ್ಟ್ ಬರೆದುಕೊಂಡಿದೆ. ರಾಮನನ್ನು ನೋಡಲು ಸ್ವತಃ ಹನುಮಾನ್ ಬಂದಂತೆ ಎನಿಸಿತು ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ಈ ವಿಚಾರ ಭಕ್ತರಲ್ಲಿ ಸಂಚಲನ ಮೂಡಿಸಿದೆ. ಹನುಮಂತನ ಸಂಕೇತವಾದ ಕೋತಿಗಳು ಅಯೋಧ್ಯೆಯಲ್ಲಿ ಎಲ್ಲೆಂದರಲ್ಲಿ ನೆಲೆಸಿವೆ.