ನ್ಯೂಸ್ ನಾಟೌಟ್ : ಅತ್ತ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರಾಣಪ್ರತಿಷ್ಠೆ ಸಂಭ್ರಮ ಮುಗಿಲು ಮುಟ್ಟಿದ್ದರೆ ,ಇತ್ತ ಇಡೀ ದೇಶದಾದ್ಯಂತ ರಾಮ ಭಕ್ತರ ರಾಮನ ಭಜನೆ ಮೊಳಗಿತ್ತು. ಸಾರ್ವಜನಿಕರು ಇದು ತಮ್ಮದೇ ಹಬ್ಬ ಎಂಬಂತೆ ಸಂಭ್ರಮಿಸಿದರು.
ರಾಮ ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ನಗರದಾದ್ಯಂತ ಹಲವು ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಹೋಮ ಮತ್ತಿತರ ಧಾರ್ಮಿಕ ಕಾರ್ಯಗಳು, ನಂತರ ಅನ್ನ ಪ್ರಸಾದ ವಿತರಣೆ ನಡೆದವು. ಬೀದಿ ಬೀದಿಗಳಲ್ಲಿ, ರಿಕ್ಷಾ ನಿಲ್ದಾಣಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಮಳಿಗೆಗಳ ಮುಂಭಾಗಗಳಲ್ಲಿ ರಾಮನ ಚಿತ್ರಪಟಗಳನ್ನಿಟ್ಟು ಹೂಮಾಲೆ ಹಾಕಿ ಪೂಜೆ ಮಾಡಿ ಭಕ್ತರಿಗೆ ಸಿಹಿ ಪ್ರಸಾದ ವಿತರಿಸಲಾಯಿತು. ಸಾರ್ವಜನಿಕರು ತಮ್ಮ ಮನೆಯ ಮುಂದೆ ಓಣಿಗಳ ಬೀದಿಗಳಲ್ಲಿ ರಾಮನ ಸ್ಮರಣೆ ಮಾಡುತ್ತಲೇ ಇದ್ದರು.
ಇನ್ನು ಕೆಲ ರಾಮ ಭಕ್ತರು ಸಾರ್ವಜನಿಕರಿಗೆ ಪಾನೀಯ ಹಂಚುತ್ತಿರುವ ದೃಶ್ಯವೂ ಕಂಡು ಬಂತು.ಬಸ್ ಹಾಗೂ ಬೈಕ್ ಸೇರಿದಂತೆ ವಿವಿಧ ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದ ಸಂದರ್ಭಗಳಲ್ಲಿ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
ಇನ್ನು ಯುವಕರು ಬೈಕ್ಗಳಿಗೆ ರಾಮಧ್ವಜ ಕಟ್ಟಿಕೊಂಡು ಪ್ರಮುಖ ರಸ್ತೆಗಳಲ್ಲಿ ಓಡಾಡಿದರು. ಕೆಲವು ಕಡೆಗಳಲ್ಲಿ ಯುವಕರು ಕುಣಿದು ಕುಪ್ಪಳಿಸಿದರು. ಪ್ರಮುಖ ರಸ್ತೆಗಳಷ್ಟೇ ಅಲ್ಲದೇ ಓಣಿಗಳ ರಸ್ತೆಗಳೂ ಕೇಸರಿಮಯವಾಗಿದ್ದವು. ಸಂಜೆಯಾಗುತ್ತಿದ್ದಂತೆ ಒಂದೆಡೆ ಮಂದಿರ–ಮನೆಗಳಲ್ಲಿ ದೀಪ ಬೆಳಗಿ ಜನರು ಕೃತಾರ್ಥರಾದರೆ, ಹೊರಗಡೆ ಪಟಾಕಿ ಸಿಡಿಸುವ ಸಂಭ್ರಮವೂ ಜೋರಾಗಿಯೇ ಇತ್ತು.