ನ್ಯೂಸ್ ನಾಟೌಟ್: ರಾಮ ಭಕ್ತರು ಅಯೋಧ್ಯೆಯಲ್ಲಿನ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಪರದೆಗಳ ಮೂಲಕ ನೋಡಿ ಕಣ್ತುಂಬಿಕೊಂಡ್ರೆ ಇನ್ನೂ ಕೆಲವರು ನೇರವಾಗಿ ಅಲ್ಲಿಗೆ ಭೇಟಿ ಕೊಟ್ಟು ಆ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಕಾತುರದಲ್ಲಿದ್ದಾರೆ. ಹೀಗಾಗಿ ಇಂತಹ ಮೈಸೂರು ಭಾಗದ ಭಕ್ತರಿಗಾಗಿಯೇ ಇದೀಗ ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ತೆರಳಲು 15 ದಿನಕ್ಕೊಂದು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
“ಫೆ. 4ರಂದು ಮಧ್ಯಾಹ್ನ 12.15ಕ್ಕೆ ಮೈಸೂರಿನಿಂದ ಅಯೋಧ್ಯೆಗೆ ಮೊದಲ ವಿಶೇಷ ರೈಲು ಹೊರಡುತ್ತದೆ. 15 ದಿನಕ್ಕೊಮ್ಮೆ ನಿರಂತರವಾಗಿ ರೈಲು ಸಂಚಾರ ಮಾಡಲಿದೆ. ಸದ್ಯದಲ್ಲಿಯೇ ಬುಕಿಂಗ್ ಓಪನ್ ಮಾಡಲಾಗುತ್ತದೆ. ಹೋಗಿ ಬರಲು ಮೂರು ಸಾವಿರ ರೂ. ಪ್ರಯಾಣ ದರ ನಿಗದಿಗೊಳಿಸಲಾಗಿದೆ. ರೈಲಿನಲ್ಲಿ ಊಟ, ತಿಂಡಿ ವ್ಯವಸ್ಥೆ, ಅಯೋಧ್ಯೆಯಲ್ಲಿ ಉಳಿದುಕೊಳ್ಳಲು ವಸತಿ, ವ್ಯವಸ್ಥೆ ಮಾಡುತ್ತೇವೆ. ದರ್ಶನ ಮಾಡಿಕೊಂಡು ಬರಬಹುದು,” ಎಂದು ಹೇಳಿದ್ದಾರೆ.
“ಇಂಡಿಯಾ ಗೇಟ್ ಬಳಿ ಸುಭಾಷ್ಚಂದ್ರ ಬೋಸ್ ಅವರ ಪ್ರತಿಮೆಯನ್ನು ಮಾಡಿಕೊಡುವಾಗ ನಾನೇ ಪ್ರಧಾನ ಮಂತ್ರಿಗಳಿಗೆ ಅರುಣ್ ಯೋಗಿರಾಜ್ ಅವರನ್ನು ಪರಿಚಯಿಸಿದ್ದೆ. ಅದಾದ ನಂತರ ಅವರಿಗೆ ಅವಕಾಶಗಳ ಮಹಾಪೂರವೇ ಹರಿದು ಬಂದಿದೆ. ಈಗ ಅಯೋಧ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗುವ ಮೂರ್ತಿಯನ್ನು ಕೆತ್ತಿದವರೂ ಮೈಸೂರಿನವರೇ ಆಗಿದ್ದಾರೆ. ಅದಕ್ಕಾಗಿ ಬಳಕೆ ಮಾಡಿದ ಕಲ್ಲು ಮೈಸೂರಿನ ಎಚ್.ಡಿ. ಕೋಟೆ ತಾಲೂಕಿನ ಹಾರೋಹಳ್ಳಿಯದು. ಆ ಮೂಲಕ ಮೈಸೂರು ಮತ್ತು ಅಯೋಧ್ಯೆ ನಡುವೆ ಶಾಶ್ವತವಾದ ಸಂಬಂಧ ಏರ್ಪಟ್ಟಿದೆ,” ಎಂದು ಸಂತಸ ವ್ಯಕ್ತಪಡಿಸಿದರು.