ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯ ದೇಗುಲ ಲೋಕಾರ್ಪಣೆಗೊಂಡರೆ, ಅದೇ ಶುಭ ಘಳಿಗೆಯ ದಿನದಂದು ಅಶಕ್ತರಿಗೆ ಆಸರೆಯಾಗುವ ಪುಣ್ಯ ಕಾರ್ಯದಲ್ಲಿ ಮಂಡೆಕೋಲು ಘಟಕದ ಹಿಂದೂ ಜಾಗರಣ ವೇದಿಕೆ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಶ್ಲಾಘನೆಗೆ ಪಾತ್ರವಾಯಿತು.
ಬಡ ಮಹಿಳೆಯ ತನ್ನೆರಡೂ ಕಿಡ್ನಿಗಳು ವೈಫಲ್ಯಗೊಂಡ ಪರಿಣಾಮ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದರು. ಇದೀಗ ಕನ್ಯಾನದ ಕೇಳು ಮಣಿಯಾಣಿ ಅವರ ಪತ್ನಿ ಲಕ್ಷ್ಮಿ ಎಂಬವರಿಗೆ ಚಿಕಿತ್ಸಾ ವೆಚ್ಚ ಭರಿಸಲು ರೂ. 1,00,100 ( ಒಂದು ಲಕ್ಷದ ನೂರು ರೂಪಾಯಿ) ನೀಡಲಾಯಿತು. ನಿವೃತ್ತ ಯೋಧ ಅಡ್ಡಂತಡ್ಕ ದೇರಣ್ಣ ಗೌಡ ಅವರು ಲಕ್ಷ್ಮಿ ಕುಟುಂಬಕ್ಕೆ ಸಂಗ್ರಹಿತ ಮೊತ್ತ ಹಸ್ತಾಂತರಿಸಿದರು.
ಈ ಸಂದರ್ಭ ವೇದಿಕೆಯ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದರು. ಬಡಬಗ್ಗರ ತುರ್ತು ಚಿಕಿತ್ಸೆಗೆ ನೆರವಾಗಲು ‘ಅಯೋಧ್ಯಾ ಶ್ರೀರಾಮ ವೆಲ್ಫೇರ್ ಫಂಡ್’ ರಚಿಸಲು ಸಲಹೆಯನ್ನೂ ನೀಡಿದ್ದಾರೆ. ವೇದಿಕೆಯ ವತಿಯಿಂದ ಹೀಗೊಂದು ನಿಧಿ ಸ್ಥಾಪನೆಗೊಳ್ಳುವುದಾದರೆ ತಾನು ತನ್ನ ಒಂದು ತಿಂಗಳ ವಿಶ್ರಾಂತಿ ವೇತನವನ್ನು ದೇಣಿಗೆ ನೀಡಲು ಸಿದ್ಧ ಎಂದವರು ಘೋಷಿಸಿದರು.ಸಹಾಯಧನ ಪಡೆದ ಸಂತ್ರಸ್ತೆ ಲಕ್ಷ್ಮಿ ಅವರ ಪುತ್ರಿ ಮಾತನಾಡಿ ‘ಸಕಾಲದಲ್ಲಿ ನೆರವಿಗೆ ಧಾವಿಸಿ ಧನ ಸಹಾಯ ಸಂಗ್ರಹಿಸಿ ಕೊಟ್ಟ ವೇದಿಕೆಯ ಸಾಮಾಜಿಕ ಕಾರ್ಯಕ್ಕೆ ನಾವೆಂದು ಚಿರ ಋಣಿ” ಎಂದು ಕಣ್ಣೀರಾಗುತ್ತಲೇ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಜಾಗರಣಾ ವೇದಿಕೆಯ ಮಹೇಶ್ ಉಗ್ರಾಣಿಮನೆ, ಲಕ್ಷ್ಮಣ ಉಗ್ರಾಣಿಮನೆ, ಗ್ರಾ.ಪಂ. ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಸದಸ್ಯ ಬಾಲಚಂದ್ರ ದೇವರಗುಂಡ,ಮಂಡೆಕೋಲು ಗ್ರಾ.ಪಂ ಸದಸ್ಯ ಡಿ.ಸಿ ಬಾಲಚಂದ್ರ,ಗೌರವಾಧ್ಯಕ್ಷ ಕುಮಾರನ್ ಮಾವಂಜಿ, ಮಂಡೆಕೋಲು ಘಟಕದ ಅಧ್ಯಕ್ಷ ಹೇಮಂತ್ ಮಂಡೆಕೋಲು, ಗ್ರಾ.ಪಂ ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಮಂಡೆಕೋಲು ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ ಟಿ , ನವೋದಯ ಸ್ವ ಸಹಾಯ ಸಂಘದ ಪ್ರೇರಕಿ ಸಂಧ್ಯಾ ಮಂಡೆಕೋಲು, ಪ್ರಮುಖರಾದ, ರಘುಪತಿ ಉಗ್ರಾಣಿಮನೆ, ಗಂಗಾಧರನ್ ಮಾವಂಜಿ, ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಳೆದ ಹನ್ನೊಂದು ವರ್ಷಗಳಿಂದ ಡಯಾಲಿಸಿಸ್ ಮಾಡಿಸಬೇಕಾದ ಅನಿವಾರ್ಯತೆಯಲ್ಲಿದ್ದ ಲಕ್ಷ್ಮಿ ಅವರದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಬಡ ಕುಟುಂಬ. ಇದೀಗ ತುರ್ತು ಶಸ್ತ್ರ ಚಿಕಿತ್ಸೆಗಾಗಿ ಹಣ ಹೊಂದಿಸಬೇಕಾದ ಕಾರಣ ಕುಟುಂಬಕ್ಕೆ ನೆರವಾಗಲು ಹಿಂದೂ ಜಾಗರಣ ವೇದಿಕೆಯ ಮಂಡೆಕೋಲು ಘಟಕ ಯೋಚಿಸಿತು. ವೇದಿಕೆಯ ಪ್ರಮುಖರು ತಾವೇ ತಲಾ ಒಂದು ಸಾವಿರದಂತೆ ಮುಂಗಡ ಒಟ್ಟುಗೂಡಿಸಿ ಬಳಿಕ ಲಕ್ಷ್ಮಿ ಅವರ ಬ್ಯಾಂಕ್ ಖಾತೆಯ ವಿವರವಿದ್ದ ಮನವಿ ಪತ್ರವೊಂದನ್ನು ರಚಿಸಿ ತಮ್ಮ ವಾಟ್ಸ್ಯಾಪ್ ಗ್ರೂಪ್ ನಲ್ಲಿ ನೆರವಿಗಾಗಿ ಕೋರಿದರು. ಅಂತೆಯೇ ಲಕ್ಷ್ಮಿ ಅವರ ಸಂಕಷ್ಟ ಅರಿತ ವೇದಿಕೆಯ ಸದಸ್ಯರು, ಇತರರು ಸುಮಾರು ಒಂದು ಲಕ್ಷ ರೂ ಒಟ್ಟುಗೂಡಿಸಿ ಶ್ರೀ ರಾಮನ ಭವ್ಯ ದೇಗುಲ ಉದ್ಘಾಟನೆಯ ದಿನವೇ ಧನ ಸಹಾಯ ನೀಡುವುದರೊಂದಿಗೆ ಬಡವರ ಸೇವೆಯಲ್ಲೇ ದೇವರನ್ನು ಕಾಣುವ ಕೈಂಕರ್ಯಕ್ಕೆ ಮುನ್ನುಡಿ ಬರೆದರು.