ನ್ಯೂಸ್ ನಾಟೌಟ್ : ಜನವರಿ 22 ರಂದು ಅಂದರೆ ನಾಳೆ, ಅಯೋಧ್ಯಾ ರಾಮ ಮಂದಿರ ಉದ್ಘಾಟನೆ ನಡೆಯಲಿದ್ದು, ಅಂದೇ ಮಂದಿರವನ್ನು ಸ್ಫೋಟಿಸುವುದಾಗಿ 21 ವರ್ಷದ ಯುವಕನೊಬ್ಬ ಪೊಲೀಸ್ ಠಾಣೆಗೆ ಕರೆ ಮಾಡಿ, ಬೆದರಿಕೆ ಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ.
ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಬಿಹಾರ ಪೊಲೀಸ್ ಇಲಾಖೆಯ (Bihar Police) ಹಿರಿಯ ಅಧಿಕಾರಿಯು, ಬೆದರಿಕೆ ಹಾಕಿದ ಯುವಕನನ್ನು ಅರಾರಿಯಾ ಜಿಲ್ಲೆಯಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತ ಯುವಕನನ್ನು ಇಂತೆಖಾಬ್ ಆಲಂ ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ಪಲಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಲುವಾ ಕಲಿಯಗಂಜ್ನಲ್ಲಿರುವ ತನ್ನ ಮನೆಯಿಂದಲೇ ಬಂಧಿತ ಯುವಕ ಪೊಲೀಸ್ ಠಾಣೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಎಂದು ಅರಾರಿಯಾದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಬಂಧಿತ ಯುವಕ ಜನವರಿ 19 ರಂದು ನಾಗರಿಕರು ತುರ್ತು ಸಹಾಯವನ್ನು ಪಡೆಯಬಹುದಾದ 112 ಸಂಖ್ಯೆಗೆ ಡಯಲ್ ಮಾಡಿದ್ದ. ಅವನು ತನ್ನನ್ನು ಛೋಟಾ ಶಕೀಲ್ ಮತ್ತು ತಾನು ದಾವೂದ್ ಇಬ್ರಾಹಿಂನ ಆಪ್ತ ಎಂದು ಹೇಳಿಕೊಂಡಿದ್ದಾನೆ ಎಂದು ಸಿಂಗ್ ತಿಳಿಸಿದ್ದಾರೆ.
ಪ್ರಕರಣದ ಸೂಕ್ಷ್ಮತೆಯ ಹಿನ್ನೆಲೆಯಲ್ಲಿ ಪಲಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಬಂಧಿತ ಯುವಕನ ಮೊಬೈಲ್ ಅನ್ನು ಜಪ್ತಿ ಮಾಡಲಾಗಿದೆ.