ನ್ಯೂಸ್ ನಾಟೌಟ್ : ರಾಜಧಾನಿಯ ಪುಟ್ಟೇನಹಳ್ಳಿಯ ಪೊಲೀಸ್ ಠಾಣೆಯಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದ್ದು, ಠಾಣೆಯಲ್ಲಿ ನನ್ನ ಹೆಂಡತಿಯನ್ನು (Wife) ಹುಡುಕಿಕೊಡಿ ಎಂದು ವ್ಯಕ್ತಿಯೋರ್ವ ದೂರು ದಾಖಲಿಸಿದ್ರೆ, ಆಕೆ ಪತಿಯನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇಲಿಯಾಸ್ ನಗರದ ವಸೀಂ ಎಂಬಾತ ಎಳು ವರ್ಷಗಳ ಹಿಂದೆ ಸುಮೈಯಾ ಬಾನು ಎಂಬವವರನ್ನು ಮದುವೆಯಾಗಿದ್ದನು. ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗುವೊಂದಿದೆ. ಆದರೆ ವಸೀಂಗೆ ಮತ್ತೊಬ್ಬ ಮಹಿಳೆ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದನು ಎನ್ನಲಾಗಿದೆ.
ಕಳೆದ ತಿಂಗಳು ಹೋಟೆಲ್ನಲ್ಲಿ ಪತಿ ಬೇರೆ ಮಹಿಳೆ ಜೊತೆಗಿರುವಾಗಲೇ ಸುಮೈಯಾ ಬಾನು ಮತ್ತು ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು ಎಂದು ವರದಿ ತಿಳಿಸಿದೆ.
ಈ ವೇಳೆ ಮೂವರ ನಡುವೆ ಗಲಾಟೆಯೂ ನಡೆದಿತ್ತು. ಹೋಟೆಲ್ನಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು.
ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸರು ಎರಡೂ ಕುಟುಂಬಗಳ ನಡುವೆ ರಾಜಿ ಪಂಚಾಯ್ತಿ ನಡೆಸಿದ್ದರು. ನಂತರ ಎಲ್ಲರೂ ಹಿಂದಿರುಗಿದ್ದರು.
ಇದೀಗ ವಸೀಂ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಜೊತೆ ಪರಾರಿಯಾಗಿದ್ದಾನೆ. ಪತಿಯನ್ನು ಕಾಣದ ಸುಮೈಯಾ ಬಾನು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇತ್ತ ಆ ಮಹಿಳೆಯ ಪತಿ ನಯೀಂ ಸಹ ಪೊಲೀಸ್ ಠಾಣೆಯಲ್ಲಿ ಪತ್ನಿಯನ್ನು ಹುಡುಕಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.