ನ್ಯೂಸ್ ನಾಟೌಟ್ :ಕಾಡು ಬದಿಯಲ್ಲಿರುವ ಮನೆಗಳ ಬಳಿ ಚಿರತೆ ಕಾಟ ಹೆಚ್ಚಾಗಿರುವುದನ್ನು ಕೇಳಿದ್ದೇವೆ.ಆದರೆ ಪಟ್ಟಣ ಪ್ರದೇಶದಲ್ಲಿರುವ ಹೊಟೇಲ್ವೊಂದಕ್ಕೆ ಚಿರೆತೆಯೊಂದು ನುಗ್ಗಿ ಭಾರಿ ಆತಂಕವನ್ನೇ ಸೃಷ್ಟಿಸಿದೆ. ಜೈಪುರದ ಕನೋಟಾದಲ್ಲಿರುವ ಹೋಟೆಲ್ಗೆ ಈ ಚಿರತೆ ನುಗ್ಗಿದ್ದು, ಪ್ರವಾಸಿಗರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
ಹೋಟೆಲ್ ಕೋಣೆಗೆ ನುಗ್ಗಿದ ಚಿರತೆಯನ್ನು ಸುಮಾರು ಎರಡು ಗಂಟೆಗಳ ಕಾಲ ಆ ಕೋಣೆಯಲ್ಲಿ ಲಾಕ್ ಮಾಡಿ, ಹೋಟೆಲ್ನ ಆಡಳಿತ ಮಂಡಳಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಇದೇ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಚಿರತೆ ಕೊಠಡಿಯಲ್ಲಿರುವ ದೃಶ್ಯಗಳನ್ನು ತಮ್ಮ ಫೋನ್ನಲ್ಲಿ ರೆಕಾರ್ಡ್ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಕೊಠಡಿಯೊಳಗೆ ಚಿರತೆ ನುಗ್ಗಿದಾಗ ಕೋಣೆಯಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಚಿರತೆಯನ್ನು ಕಂಡ ಹೋಟೆಲ್ ಆಡಳಿತ ಮಂಡಳಿಯವರು ಕೊಠಡಿಗೆ ಹೊರಗಿನಿಂದ ಬೀಗ ಹಾಕಿ, ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮೃಗಾಲಯದ ತಂಡ ಚಿರತೆಯನ್ನು ಅತ್ಯಂತ ಜಾಣ್ಮೆಯಿಂದ ಹಿಡಿದು ಬೋನಿಗೆ ಹಾಕಿದ್ದಾರೆ. ಬಳಿಕ ಚಿರತೆಯನ್ನು ಜೈಪುರ ಮೃಗಾಲಯಕ್ಕೆ ಸ್ಥಳಾಂತರಿಸಿದ್ದು,ನಂತರ ಅಧಿಕಾರಿಗಳ ಆದೇಶದಂತೆ ಕಾಡಿಗೆ ಬಿಡಲಾಗಿದೆ ಎಂದು ವರದಿಯಾಗಿದೆ.