ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ನಡೆಯುತ್ತಿರುವ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆ ದೇಶಾದ್ಯಂತ ರಾಮನ ಭಕ್ತರು ವಿಶೇಷ ಆಚರಣೆಗಳನ್ನು ಆರಂಭಿಸಿದ್ದಾರೆ.ಈ ಸುಂದರ ಕ್ಷಣಕ್ಕಾಗಿ ಇಡೀ ವಿಶ್ವದಲ್ಲಿರುವ ಹಿಂದೂಗಳು ಕಾತುರದ ಕಣ್ಣುಗಳಿಂದ ಕಾಯುತ್ತಿದ್ದಾರೆ.೫೦೦ ವರ್ಷಗಳ ಹಿಂದಿನ ಕನಸು ಈಗ ನನಸಾಗುತ್ತಿರುವುದಕ್ಕೆ ಎಲ್ಲರ ಮುಖದಲ್ಲಿಯೂ ಮಂದಹಾಸ ಚಿಮ್ಮಿ ಬರುತ್ತಿದೆ.ಈ ಮಧ್ಯೆ ಇಲ್ಲೊಬ್ಬ ಬಾಲಕ ವಿಶೇಷ ರೀತಿಯಲ್ಲಿ ಸುದ್ದಿಯಾಗಿದ್ದಾನೆ.ಪಿರಿಯಾಪಟ್ಟಣದ 12 ವರ್ಷದ ಬಾಲಕನೊಬ್ಬ ರೂಬಿಕ್ಸ್ ಕ್ಯೂಬ್ನಲ್ಲಿ ರಾಮನ ಚಿತ್ರ ಬಿಡಿಸುವ ಮೂಲಕ ಜನರ ಗಮನ ಸೆಳೆದಿದ್ದಾನೆ.
ಮಡಿಕೇರಿಯ ಗೋಣಿಕೊಪ್ಪ ರಸ್ತೆಯ ನಿವಾಸಿ ಮೃದುಲಾ ಮತ್ತು ಪಿ.ಎನ್. ವಿನಯ್ ದಂಪತಿ ಪುತ್ರ ಪ್ರಣವ್ ಈ ಸಾಧನೆ ಮಾಡಿದ ಬಾಲಕ ಎಂದು ತಿಳಿದು ಬಂದಿದೆ.ಪ್ರಣವ್ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದು, ರೂಬಿಕ್ಸ್ ಕ್ಯೂಬ್ ಸಾಲ್ವ್ ಮಾಡುವುದರಲ್ಲಿ ಪರಿಣಿತನಾಗಿದ್ದಾನೆ.ಈತ 22 ವಿವಿಧ ರೀತಿಯ ಕ್ಯೂಬ್ಗಳನ್ನು ಸಾಲ್ವ್ ಮಾಡಿ ಕರ್ನಾಟಕ ಬುಕ್ ಆಫ್ ರೇಕಾರ್ಡ್ ದಾಖಲೆ ಮಾಡಿದ್ದಾನೆ ಅನ್ನೋದು ವಿಶೇಷ.ಇವಿಷ್ಟು ಮಾತ್ರವಲ್ಲದೇ ಇಂಡಿಯಾ ಬುಕ್ ಆಫ್ ರೇಕಾರ್ಡ್ ನಲ್ಲಿಯೂ ಈ ಬಾಲಕ ಸಾಧನೆ ಮಾಡಿ ಕೀರ್ತಿ ತಂದಿದ್ದಾನೆ.
ಸದ್ಯ ಇ ಬಾಲಕ ಬರೋಬ್ಬರಿ 498 ಕ್ಯೂಬ್ ಗಳನ್ನು ಬಳಿಸಿ ಶ್ರೀರಾಮನ ಚಿತ್ರ ರಚನೆ ಮಾಡಿದ್ದು ವೈರಲ್ ಆಗಿದೆ. ಈ ಹಿಂದೆಯೂ ರೂಬಿಕ್ಸ್ ಕ್ಯೂಬ್ನಲ್ಲಿ ಪ್ರಣವ್ ಶ್ರೀಕೃಷ್ಣ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಶಿವಕುಮಾರ ಸ್ವಾಮೀಜಿ ಮುಂತಾದ ಮಹನೀಯರ ಚಿತ್ರಗಳನ್ನು ರಚಿಸಿ ಸುದ್ದಿಯಾಗಿದ್ದ. ಅಲ್ಲದೇ ಪ್ರಧಾನಿ ಮೋದಿಯವರ (Narendra Modi )ಜನ್ಮ ದಿನಾಚರಣೆ ವೇಳೆ ಅವರ ಭಾವಚಿತ್ರವನ್ನು ರೂಬಿಕ್ಸ್ ಕ್ಯೂಬ್ ಬಳಸಿ ರಚಿಸಿದ್ದ. ಈತನ ಸಾಧನೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.