ನ್ಯೂಸ್ ನಾಟೌಟ್ :ಕೆಲವೊಮ್ಮೆ ಅಚಾನಕ್ ಆಗಿ ಲಿಫ್ಟ್ ಕೈ ಕೊಟ್ಟಾಗ ಉಸಿರು ಚೆಲ್ಲಿದಂತ ಭಾವನೆ ನಮ್ಮದಾಗಿ ಬಿಡುತ್ತೆ. ಹಾಗಾದ್ರೆ ವಿಮಾನದ ಶೌಚಾಲಯದಲ್ಲಿ ಸಿಲುಕಿಹಾಕಿಕೊಂಡ್ರೆ ಹೇಗನ್ನಿಸಬೇಡ.ಅದು ಕೂಡಾ ಪ್ರಯಾಣದುದ್ದಕ್ಕೂ ಇಂತಹ ಅನುಭವ ಆದ್ರೆ ಆ ವ್ಯಕ್ತಿಗಾಗುವ ಸಂಕಟ ಎಂತಹದ್ದು ಅನ್ನೋದನ್ನು ಒಮ್ಮೆ ಕಲ್ಪಿಸಿ ಕೊಂಡ್ರೆ ನಿಜಕ್ಕೂ ಭಯವಾಗುತ್ತೆ.
ಆದ್ರೆ ಇಂತಹುದ್ದೇ ಒಂದು ಘಟನೆಯೊಂದು ನಡೆದಿದೆ ಎನ್ನಲಾದ ಬಗ್ಗೆ ವರದಿಯಾಗಿದೆ. ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ಸ್ಪೈಸ್ಜೆಟ್ ವಿಮಾನದಲ್ಲಿ ಟಾಯ್ಲೆಟ್ ಬಾಗಿಲು ಅಸಮರ್ಪಕವಾಗಿದ್ದರಿಂದ ಪ್ರಯಾಣಿಕರೊಬ್ಬರು ಒಳಗೆ ಸಿಲುಕಿ ಪ್ರಯಾಣಿಸಿದ್ದ ಘಟನೆ ನಡೆದಿದೆ. ಮಾತ್ರವಲ್ಲ , ಇದೀಗ ಆ ಪ್ರಯಾಣಿಕನಿಗೆ ಸಂಪೂರ್ಣ ಟಿಕೆಟ್ ಮೊತ್ತವನ್ನು ಮರುಪಾವತಿ ಮಾಡಲಾಗುತ್ತಿದೆ ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ನಂತರ ಇಂಜಿನಿಯರ್ ಶೌಚಾಲಯದ ಬಾಗಿಲು ತೆರೆದ ನಂತರ ಪ್ರಯಾಣಿಕರು ಹೊರಗೆ ಬಂದಿದ್ದರು. ಪ್ರಯಾಣಿಕರ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಎಂದು ಹೇಳಲಾಗಿದೆ. ಜನವರಿ 16ರಂದು ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ಸ್ಪೈಸ್ಜೆಟ್ ವಿಮಾನದ ಬಾಗಿಲಿನ ಲಾಕ್ ದೋಷದಿಂದಾಗಿ ಪ್ರಯಾಣಿಕರೊಬ್ಬರು ಸುಮಾರು ಒಂದು ಗಂಟೆಗಳ ಕಾಲ ಶೌಚಾಲಯದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ ವಿಮಾನವು ಮುಂಬೈಯಿಂದ ಬೆಂಗಳೂರಿಗೆ ಸಂಚರಿಸುತ್ತಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.
ಇದೀಗ ಘಟನೆಯ ಕುರಿತು ಪ್ರಯಾಣಿಕನ ಬಳಿ ವಿಷಾದಿಸಿರುವ ಸ್ಪೈಸ್ ಜೆಟ್ ವಿಮಾನ ಯಾನ ಸಂಸ್ಥೆಯು, ಪ್ರಯಾಣಿಕನಿಗೆ ಸಂಪೂರ್ಣ ಮೊತ್ತವನ್ನು ಮರುಪಾವತಿಸುವುದಾಗಿ ಭರವಸೆ ನೀಡಿದೆ.