ನ್ಯೂಸ್ ನಾಟೌಟ್ : ಇಡೀ ವಿಶ್ವವೇ ಅಯೋಧ್ಯೆಯತ್ತ ಕಾತರದ ಕಣ್ಣುಗಳಿಂದ ಕಾಯುತ್ತಿದೆ. ಎಲ್ಲಾ ಶ್ರೀ ರಾಮ ಭಕ್ತರು ಜನವರಿ ೨೨ರ ಶುಭ ದಿನಕ್ಕೆ ಕಾಯುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲನಾ ಮೂರ್ತಿ ಪ್ರಾಣ ಪ್ರತಿಷ್ಠಾಪಿಸಲು ಸಿದ್ಧತೆ ನಡೆಯುತ್ತಿದ್ದು, ಭಕ್ತರು ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ.
ಇದೀಗ ಪ್ರಭು ಶ್ರೀ ರಾಮ ಚಂದ್ರ ಹೆಜ್ಜೆಯಿಟ್ಟ ಸ್ಥಳಗಳ ಬಗ್ಗೆ ಒಂದೊಂದೇ ಮಾಹಿತಿ ಲಭ್ಯವಾಗುತ್ತಿವೆ. ಈ ಹಿನ್ನಲೆಯಲ್ಲಿ ನೋಡೋದಾದ್ರೆ ಶ್ರೀ ರಾಮ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿಗೂ ಬಂದಿದ್ದರು ಅನ್ನೋದಕ್ಕೆ ಸಾಕ್ಷಿಗಳು ಸಿಕ್ಕಿವೆ.ಅಂದು ರಾಮಪುರ ಎಂದೇ ಖ್ಯಾತಿಯಾಗಿದ್ದ ಇಂದಿನ ಕಣಿವೆ ಗ್ರಾಮಕ್ಕೂ ಶ್ರೀರಾಮ, ಲಕ್ಷ್ಮಣ ಹಾಗೂ ಹನುಮಂತ ಬಂದಿದ್ದರೆಂಬ ಪ್ರತೀತಿ ಇದೆ. ಅಷ್ಟೇ ಅಲ್ಲ ಶ್ರೀರಾಮ ಬಂದು ಸಂಧ್ಯಾವಂದನೆ ಮಾಡುವುದಕ್ಕಾಗಿ ಮರಳಿನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು ಎಂಬುದಕ್ಕೆ ಐತಿಹ್ಯದ ಕುರುಹುಗಳಿವೆ.
ಅಂದು ರಾವಣ ಸೀತೆಯನ್ನು ಅಪಹರಿಸುತ್ತಾನೆ.ಈ ಸಂದರ್ಭ ಆತಂಕಗೊಂಡ ರಾಮ ಸೀತೆಯನ್ನು ಹುಡುಕುತ್ತಾನೆ. ಆಗ ರಾಮ, ಲಕ್ಷ್ಮಣ ಹಾಗೂ ಹನುಮಂತರು ಇಲ್ಲಿನ ಕಾವೇರಿ ನದಿ ದಂಡೆಯಲ್ಲಿ ಇರುವ ವ್ಯಾಘ್ರಮುನಿಯ ಕುಟೀರದಲ್ಲಿ ತಂಗುತ್ತಾರೆ ಎಂದು ಕಥೆ ಹೇಳುತ್ತೆ. ಅಲ್ಲದೆ ಸಂಜೆಯಾಗುತ್ತಲೇ ಸಂಧ್ಯಾವಂದನೆಗೆಂದು ತೆರಳಿದಾಗ ಹನುಮಂತ ಹಾಗೂ ಲಕ್ಷ್ಮಣರು ಶಿವಲಿಂಗವನ್ನು ತರಲು ಕಾಶಿಗೆ ಹೋದವರು ವಾಪಸ್ ಬರುವುದು ತಡವಾಗಿದ್ದರಿಂದ ರಾಮ ಅಲ್ಲಿಯೇ ಮರಳನ್ನು ತಂದು ಶಿವಲಿಂಗವನ್ನು ಮಾಡಿ ಪೂಜಿಸಿದನೆಂದು ಹೇಳಲಾಗುತ್ತದೆ. ನಂತರ ಈ ಶಿವಲಿಂಗಕ್ಕೆ ಚೋಳರ ಕಾಲದಲ್ಲಿ ಕಲ್ಲಿನ ಗುಡಿಯನ್ನು ನಿರ್ಮಿಸಿದರು ಎನ್ನಲಾಗುತ್ತದೆ. ದೇವಾಲಯದಲ್ಲಿ ಇಂದಿಗೂ ಮರಳಿನ ಶಿವಲಿಂಗವಿದೆ ಇದು ಮರ್ಯಾದಾ ಪುರುಷೋತ್ತಮ ಅಲ್ಲಿಗೆ ಬಂದಿದ್ದ ಅನ್ನೊದಕ್ಕೆ ಸಾಕ್ಷಿ ನುಡಿಯುತ್ತೆ.
ರಾಮನ ಸಂಧ್ಯಾವಂದನೆ ಮುಗಿದ ಬಳಿಕ ಲಕ್ಷ್ಮಣ ಹಾಗೂ ಹನುಮಂತರು ಶಿವಲಿಂಗವನ್ನು ತಡವಾಗಿ ತರುತ್ತಾರೆ.ಆದರೆ ಅದನ್ನು ಏನು ಮಾಡಬೇಕೆಂಬ ಗೊಂದಲ ಮೂಡಿದಾಗ ರಾಮಲಿಂಗೇಶ್ವರ ದೇವಾಲಯದ ಹಿಂಬದಿಯಲ್ಲಿ ಇರುವ ಬೆಟ್ಟದಲ್ಲಿ ಕಾಶಿಯಿಂದ ತಂದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಯಿತು ಎಂದು ಹೇಳಲಾಗಿದೆ. ಹೀಗಾಗಿ ಇದು ಲಕ್ಷ್ಮಣೇಶ್ವರ ದೇವಾಲಯವಾಯಿತು ಎನ್ನುವ ಪ್ರತೀತಿ ಇದೆ. ಜೊತೆಗೆ ಬೆಟ್ಟದಲ್ಲಿ ತಪಸ್ಸು ಮಾಡುತ್ತಿದ್ದ ವ್ಯಾಘ್ರಮುನಿಯ ಗುಹೆ ಇಂದಿಗೂ ಇದೆ. ಅದರಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ ಇದೇ ಬೆಟ್ಟದ ಎಡಭಾಗದಲ್ಲಿ ಹರಿಹರೇಶ್ವರ ದೇವಾಲಯವಿದ್ದರೆ, ಗ್ರಾಮದಲ್ಲಿ ಬಸವೇಶ್ವರ ದೇವಾಲಯವಿದೆ ಎನ್ನುತ್ತಾರೆ ದೇವಾಲಯದ ಅಧ್ಯಕ್ಷ ಸುರೇಶ್.
ದಕ್ಷಿಣದಿಂದ ಪೂರ್ವಕ್ಕೆ ಕಾವೇರಿ ಹೊಳೆ ಹರಿದರೆ, ಉತ್ತರಕ್ಕೆ ಸ್ಮಶಾನವಿದೆ. ಇಂತಹ ವ್ಯವಸ್ಥೆ ಇರುವುದು ಕಾಶಿಯನ್ನು ಬಿಟ್ಟರೆ ಕೊಡಗಿನ ಕಣಿವೆಯಲ್ಲಿ ಮಾತ್ರ ಎನ್ನುತ್ತಾರೆ ಸುರೇಶ್. ಹೀಗೆ ಕೆಲವು ದಿನಗಳು ಇದ್ದ ಶ್ರೀರಾಮ, ಲಕ್ಷ್ಮಣ ಹಾಗೂ ಹನುಮಂತರು ನಂತರ ಮುಂದೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರಕ್ಕೆ ತೆರಳಿದರು ಎನ್ನುವ ಪ್ರತೀತಿಯೂ ಇದೆ.