ನ್ಯೂಸ್ ನಾಟೌಟ್ :ಇಡೀ ವಿಶ್ವದ ದೃಷ್ಟಿಯೇ ಭಾರತದತ್ತ ನೆಟ್ಟಿದೆ.ಕೊಟ್ಯಂತರ ರಾಮಭಕ್ತರ ಕನಸು ನನಸಾಗುತ್ತಿದ್ದು ಆ ಸಂಭ್ರಮದ ದಿನಕ್ಕಾಗಿ ಕಾಯುತ್ತಿದೆ.ಈ ಮಧ್ಯೆ ಕನ್ನಡಿಗರು ಖುಷಿ ಪಡೋ ವಿಚಾರವೊಂದಿದ್ದು,ಭವ್ಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸುವ ಮುಖ್ಯ ವಿಗ್ರಹವಾಗಿ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮನ ವಿಗ್ರಹ ಆಯ್ಕೆಯಾಗಿರೋದ್ರ ಬಗ್ಗೆ ನಿಮ್ಗೆಲ್ಲಾ ಗೊತ್ತಿದೆ.ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆಯ ಕೃಷ್ಣ ಶಿಲೆಯ ಬಾಲರಾಮನ ವಿಗ್ರಹ ಅಂತಿಮವಾಗಿ ಆಯ್ಕೆಯಾಗಿದೆ ಎಂದು ತೀರ್ಥ ಟ್ರಸ್ಟ್ ಹೇಳಿತ್ತು.ಇದೀಗ ಶ್ರೀರಾಮಲಲ್ಲಾ ವಿಗ್ರಹವನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ತಂಡದಲ್ಲಿ ವಿಟ್ಲ ಸಮೀಪದ ಉಕ್ಕುಡ ಕಲ್ಲುರ್ಟಿ ಯಡ್ಕದ ಚಿದಾನಂದ ಆಚಾರ್ಯ ಅವರೂ ಭಾಗಿಯಾಗಿದ್ದಾರೆ ಅನ್ನುವ ವಿಚಾರ ಹೊರಬಿದ್ದಿದೆ.
ಈ ವಿಗ್ರಹ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗಲಿದೆ.ಯೋಗಿರಾಜ್ ತಂಡದಲ್ಲಿ 12 ಮಂದಿ ಇದ್ದು 8 ಮಂದಿ ಮೈಸೂರು ಮೂದವರು. ನಾಲ್ವರು ದ.ಕ. ಜಿಲ್ಲೆ ಮತ್ತು ಕೋಲಾರದವರಾಗಿದ್ದಾರೆ. 4 ತಿಂಗಳ ಹಿಂದೆ ಅರುಣ್ ಯೋಗಿರಾಜ್ ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಕಾರ್ಯದ ಸಹಾಯಕ ಕೆಲಸಕ್ಕೆ ಶಿಲ್ಪಿಗಳು ಬೇಕು ಎಂದು ವಿಟ್ಲದ ಚಿದಾನಂದ ಆಚಾರ್ಯರಲ್ಲಿ ತಿಳಿಸಿದ್ದರು. ಇನ್ನೂ ನಾಲ್ವರ ಆವಶ್ಯಕತೆ ಇದ್ದುದರಿಂದ ಚಿದಾನಂದ ಅವರು ಪುತ್ತೂರಿನ ಸುಮಂತ್ ಆಚಾರ್ಯ, ಕೋಲಾರದ ಉಮಾಮಹೇಶ್ವರ ಹಾಗೂ ನಾರಾಯಣ ಆಚಾರ್ಯ ಅವರ ಜತೆಗೂಡಿ ಅಯೋಧ್ಯೆಗೆ ತೆರಳಿದ್ದರು.
ಸೆಪ್ಟಂಬರ್ 11ಕ್ಕೆ ತೆರಳಿದ ಮೈಸೂರಿನ ತಂಡ 72 ದಿನಗಳಲ್ಲಿ ವಿಗ್ರಹ ಕೆತ್ತನೆ ಕಾರ್ಯವನ್ನು ಮುಕ್ತಾಯ ಮಾಡಿತು.ಈ ಅವಧಿಯಲ್ಲಿ ತಮಗೆ ಭದ್ರತೆ, ಉತ್ತಮ ಆಹಾರ, ವಸತಿ ವ್ಯವಸ್ಥೆ ಯನ್ನು ಮಾಡಲಾಗಿತ್ತು. ಯಾವುದೇ ಅಡ್ಡಿ ಆತಂಕಗಳಿಲ್ಲದೇ ಈ ಕಾರ್ಯ ಸಾಗಿತ್ತು ಎನ್ನುತ್ತಾರೆ ವಿಟ್ಲದ ಚಿದಾನಂದ ಅವರು.
ಚಿದಾನಂದ ಆಚಾರ್ಯರು ಅಳಿಕೆ ಗ್ರಾಮದ ಮೂವಾಜೆಯ ಗೋಪಾಲ ಆಚಾರ್ಯ ಹಾಗೂ ಪುಷ್ಪಾವತಿ ದಂಪತಿಯ ಪುತ್ರ. ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಕಾರ್ಕಳದ ಕೆನರಾ ಬ್ಯಾಂಕ್ ಸಿ.ಇ. ಕಾಮತ್ ಇನ್ಸ್ಟಿಟ್ಯೂಟ್ನಲ್ಲಿ ಒಂದೂವರೆ ವರ್ಷ ಶಿಲ್ಪಕಲೆಯನ್ನು ಅಭ್ಯಾಸ ಮಾಡಿದ್ದಾರೆ.ಬಳಿಕ ಚಿಕ್ಕಬಳ್ಳಾಪುರದ ಡಾ| ಜಿ. ಜ್ಞಾನಾನಂದ ಅವರ ಬ್ರಹ್ಮಶ್ರೀ ಶಿಲ್ಪಗುರುಕುಲದಲ್ಲಿ ಸುಮಾರು 10 ವರ್ಷ ಕಾಲ ಶಿಲ್ಪಕಲಾ ಅಧ್ಯಯನ ನಡೆಸಿದರು. ಬಳಿಕ ಬೆಂಗಳೂರು ಮಲ್ಲತ್ತಹಳ್ಳಿಯ ಸಾಂಪ್ರದಾಯಿಕ ಶಿಲ್ಪಗುರುಕುಲದಲ್ಲಿ 3 ವರ್ಷ ಪ್ರತಿಮಾ ಶಿಲ್ಪ ಹಾಗೂ 4 ವರ್ಷ ದೇವಾಲಯ ಶಿಲ್ಪವನ್ನು ಕಲಿತು 8 ವರ್ಷಗಳಿಂದ ಅದೇ ಗುರುಕುಲದಲ್ಲಿ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.