ನ್ಯೂಸ್ ನಾಟೌಟ್: ಪಾಕಿಸ್ತಾನ ಮತ್ತೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಪಂಜಾಬ್ ಪ್ರಾಂತ ರಾಜಧಾನಿ ಲಾಹೋರ್ನಲ್ಲಿ 12 ಮೊಟ್ಟೆ ಬೆಲೆ 400 ಪಾಕಿಸ್ತಾನಿ ರೂಪಾಯಿಗಳನ್ನು ತಲುಪಿದೆ ಎಂದು ವರದಿ ತಿಳಿಸಿದೆ.
ಸರ್ಕಾರಿ ಬೆಲೆಪಟ್ಟಿಯನ್ನು ಜಾರಿಗೊಳಿಸಲು ಸ್ಥಳೀಯ ಆಡಳಿತ ವಿಫಲವಾದ ಬೆನ್ನಲ್ಲೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಈರುಳ್ಳಿ ದರ ಪ್ರತಿ ಕೆಜಿಗೆ 230 ರಿಂದ 250 ಆಗಿದ್ದು, ಸರ್ಕಾರ ನಿಗದಿಪಡಿಸಿದ ದರ ಪ್ರತಿ ಕೆ.ಜಿ.ಗೆ 175 ರೂಪಾಯಿ. ಲಾಹೋರ್ನಲ್ಲಿ ಮೊಟ್ಟೆ ದರ ಡಜನ್ ಗೆ 400 ರೂಪಾಯಿ ಆಗಿದ್ದರೆ ಚಿಕನ್ ದರ ಕೆ.ಜಿ.ಗೆ 615 ರೂಪಾಯಿಯನ್ನು ತಲುಪಿದೆ ಎನ್ನಲಾಗಿದೆ.
ಮುಕ್ತ ಮಾರುಕಟ್ಟೆಯಲ್ಲಿ ಬೆಲೆಸ್ಥಿರತೆಯನ್ನು ಸಾಧಿಸುವ ದೃಷ್ಟಿಯಿಂದ ಹಾಗೂ ಅಕ್ರಮವಾಗಿ ಆಹಾರವಸ್ತುಗಳ ದಾಸ್ತಾನು ಹಾಗೂ ಲಾಭಕೋರ ನೀತಿಯನ್ನು ತಡೆಯುವ ದೃಷ್ಟಿಯಿಂದ ಸ್ಥಳೀಯ ಸರ್ಕಾರಗಳ ಜತೆ ಸಮನ್ವಯದಿಂದ ಬೆಲೆ ನಿಯಂತ್ರಣ ಮಾಡುವಂತೆ ನ್ಯಾಷನಲ್ ಪ್ರೈಸ್ ಮಾನಿಟರಿಂಗ್ ಕಮಿಟಿಗೆ ಆರ್ಥಿಕ ಸಮನ್ವಯ ಸಮಿತಿ ಕಳೆದ ತಿಂಗಳು ಸೂಚನೆ ನೀಡಿತ್ತು ಎನ್ನಲಾಗಿದೆ.