ಕಳೆದ ಕೆಲವು ತಿಂಗಳ ಇತಿಹಾಸ ತೆಗೆದು ನೋಡಿದ್ರೆ ಸುಳ್ಯ ನಗರದಲ್ಲಿ ಅಲ್ಲಲ್ಲಿ ಅಪರಾಧ ಪ್ರಕರಣಗಳು ತುಸು ಹೆಚ್ಚಾದಂತೆ ಕಂಡು ಬಂದಿದೆ. ಅದರಲ್ಲೂ ಕಳ್ಳತನ ಪ್ರಕರಣಗಳು ಹೆಚ್ಚಾಗಿಯೇ ವರದಿಯಾಗಿವೆ. ನಮ್ ಜನ ಈಗ ಮನೆ ಬಿಟ್ಟು ದೂರದ ಊರಿಗೆ ಹೋಗುವುದಕ್ಕೂ ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆಗೂ ಕಳ್ಳರನ್ನ ಹಿಡಿಯುವುದು ದೊಡ್ಡ ಸವಾಲಾಗಿದೆ.
ನಮ್ಮೂರಿನಲ್ಲಿ ಎಲ್ಲ ವರ್ಗದ ಜನರಿದ್ದಾರೆ. ಬಡವರು, ಶ್ರೀಮಂತರು, ದೇಶದ ವಿವಿಧ ಭಾಗದಿಂದ ಕೆಲಸ ಅರಸುತ್ತಾ ಬಂದ ಅದೆಷ್ಟೋ ದೂರದ ಊರಿನ ಕೂಲಿ ಕಾರ್ಮಿಕರು, ಸಾವಿರಾರು ರಾಜ್ಯ-ಹೊರರಾಜ್ಯದ ವಿದ್ಯಾರ್ಥಿಗಳು ಸುಳ್ಯದಲ್ಲಿ ನೆಲೆಸಿದ್ದಾರೆ. ಕೆವಿಜಿ ಶಿಕ್ಷಣ ಸಂಸ್ಥೆಗಳಿಂದ ಸುಳ್ಯದ ಶಿಕ್ಷಣ ವ್ಯವಸ್ಥೆಯೇ ಉನ್ನತ ಮಟ್ಟಕ್ಕೇರಿದೆ. ಇಡೀ ದೇಶದ ಜನ ಇತ್ತ ತಿರುಗಿ ನೋಡುವಂತಾಗಿದ್ದು ತಮ್ಮ ಮಕ್ಕಳನ್ನು ವೈದ್ಯಕೀಯ, ತಾಂತ್ರಿಕ ಶಿಕ್ಷಣದ ಉನ್ನತ ವ್ಯಾಸಂಗಕ್ಕಾಗಿ ಪೋಷಕರು ಇತ್ತ ಕಡೆ ಕಳುಹಿಸುತ್ತಿದ್ದಾರೆ. ಒಟ್ಟಾರೆ ಸುಳ್ಯವನ್ನು ನಾವು ಆಳವಾಗಿ ಅಧ್ಯಯನ ನಡೆಸಿ ನೋಡುವುದಾದರೆ ತುಂಬಾ ಅಭಿವೃದ್ಧಿ ಹೊಂದುತ್ತಿದೆ. ಇಂತಹ ಅಭಿವೃದ್ಧಿ ಹೊಂದುತ್ತಿರುವ ಸಣ್ಣ ನಗರದಲ್ಲಿ ಸಿಸಿಟಿವಿ ಅಳವಡಿಕೆ ವ್ಯವಸ್ಥೆಯನ್ನೇ ಸರಿಯಾಗಿ ನಿರ್ವಹಿಸಿಲ್ಲ ಅನ್ನೋದು ನೋವಿನ ವಿಚಾರ.
ಸುಳ್ಯದ ಬಹುತೇಕ ರಸ್ತೆಗಳು ಕಿರಿದಾಗಿದೆ. ಅಂತಹ ರಸ್ತೆಗಳಲ್ಲಿ ಹೆಚ್ಚು ಜನದಟ್ಟಣೆ ಇದ್ದರೆ ಹೇಗಾಗಬೇಡ. ಅದರಲ್ಲೂ ಹೆಚ್ಚು ಜನ ರಶ್ ಇರುವ ಜಾಗ ಅದು ಶ್ರೀರಾಮ ಪೇಟೆ. ಸದಾ ಜನಜಂಗುಳಿ ವಾಹನಗಳ ಅಬ್ಬರ ಈ ರಸ್ತೆಯಲ್ಲಿ ತುಸು ಜೋರಾಗಿರುತ್ತದೆ. ಜನರಿಗೆ ರಸ್ತೆ ದಾಟುವುದಕ್ಕೂ ಇಲ್ಲಿ ಕಷ್ಟ. ಸಂಜೆ -ಬೆಳಗ್ಗೆ ಆಗುತ್ತಲೇ ಇಕ್ಕಟ್ಟಿನ ದಾರಿಯಾಗಿ ಮಾರ್ಪಡುತ್ತದೆ. ನೀವು ಮಂಗಳೂರು ಕಡೆಯಿಂದ ಸುಳ್ಯ ನಗರದ ಮಧ್ಯ ಭಾಗಕ್ಕೆ ಬರುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀರಾಮ ಭಜನಾ ಮಂದಿರ ಸಿಗುತ್ತದೆ. ಅದೇ ದಾರಿಯಲ್ಲಿ ಮುಂದೆ ಬಂದಾಗ ನ್ಯೂಸ್ ನಾಟೌಟ್ ಕಚೇರಿ. ಹಾಗೆ ಸ್ವಲ್ಪ ಮುಂದಕ್ಕೆ ಬಂದಾಗ ಬಲಬದಿಗೆ ಫಿಶ್ ಮಾರ್ಕೆಟ್ , ಜೂನಿಯರ್ ಕಾಲೇಜು, ವಿವೇಕಾನಂದ ಸರ್ಕಲ್ ಮೂಲಕ ಕೆವಿಜಿ ಕ್ಯಾಂಪಸ್ ಗೆ ಹೋಗುವ ರಸ್ತೆ. ತಾಲೂಕು ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕೆಲಸಕ್ಕೂ ನಮ್ಮೂರಿನ ಜನ ಈ ರಸ್ತೆಯನ್ನೇ ಹೆಚ್ಚು ಅವಲಂಬಿಸಿದ್ದಾರೆ.
ಪ್ರತಿ ದಿನ ಈ ರಸ್ತೆಯಲ್ಲಿ ವಾಹನ ಸಂಖ್ಯೆ, ವಿದ್ಯಾರ್ಥಿಗಳು ಮತ್ತು ಜನರ ಓಡಾಟ ಭಾರಿ ಸಂಖ್ಯೆಯಲ್ಲಿರುತ್ತದೆ. ಇಷ್ಟು ಓಡಾಟವಿರುವ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳೆ ಇಲ್ಲ. ಏನಾದರೂ ಅವಘಡ, ಕ್ರೈಂ, ಸಮಾಜಬಾಹಿರ ಚಟುವಟಿಕೆ ನಡೆದರೆ ಒಂದು ಸಾಕ್ಷಿಯೂ ಪೊಲೀಸರಿಗೆ ಸಿಗುವುದಿಲ್ಲ. ದಿನವೊಂದಕ್ಕೆ ಸಾವಿರಾರು ಜನರು ಓಡಾಡುವ ಜಾಗದಲ್ಲಿ ಸಿಸಿಟಿವಿ ಅಳವಡಿಸಬೇಕಿರುವುದು ಯಾರ ಕರ್ತವ್ಯ..? ಜನ ಪರ ಆಡಳಿತ ಹಿಡಿದ ರಾಜಕಾರಣಿಗಳದ್ದೋ ಅಥವಾ ನಗರ ಪಂಚಾಯತ್ ಅಧಿಕಾರಿಗಳದ್ದೋ..? ಇದಕ್ಕೊಂದು ತಾಜಾ ಉದಾಹರಣೆ ನೀಡುತ್ತೇನೆ.
ಇತ್ತೀಚೆಗೆ ನಗರ ಪಂಚಾಯತ್ ರಸ್ತೆಯಲ್ಲೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಮಗೆ ಸಿಸಿಟಿವಿ ಫೂಟೇಜ್ ಅವಶ್ಯಕತೆ ಇತ್ತು. ಫಿಶ್ ಮಾರ್ಕೆಟ್, ಸಮೀಪದ ಅಂಗಡಿ, ನಗರ ಪಂಚಾಯತ್ ಎಲ್ಲರನ್ನೂ ವಿಚಾರಿಸಿದರೂ ಯಾರಲ್ಲೂ ಸಾರ್ವಜನಿಕ ರಸ್ತೆಗೆ ಅಳವಡಿಸಿದ ಸಿಸಿಟಿವಿ ಇಲ್ಲ ಅನ್ನುವ ಉತ್ತರ ಬಂತು. ಒಂದು ವೇಳೆ ದೊಡ್ಡ ಅವಘಡಗಳೇ ಸಾರ್ವಜನಿಕ ರಸ್ತೆಯಲ್ಲಿ ನಡೆದಿದ್ದರೆ ಅದಕ್ಕೆ ಅಗತ್ಯವಾಗಿದ್ದ ದಾಖಲೆ ಮಾಹಿತಿಯನ್ನು ನೀಡುವುದು ಯಾರು..? ಅಪರಾಧಿಗಳನ್ನು ಪೊಲೀಸರು ಹುಡುಕುವುದು ಹೇಗೆ..? ಇದೆಲ್ಲವನ್ನು ಆಡಳಿತ ವರ್ಗದವರು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ತಕ್ಷಣ ಆ ರಸ್ತೆಯ ಉದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಆಗಲಿ. ಜೊತೆಗೆ ಈಗಾಗಲೇ ಕೆಲವು ಕಡೆ ಅಳವಡಿಸಿರುವ ಸಿಸಿಟಿವಿ ಸರಿಯಾಗಿ ಕೆಲಸ ನಿರ್ವಹಿಸುತ್ತಿದೆಯೇ ಅನ್ನುವ ಪರಿಶೀಲನೆ ನಡೆಯಲಿ. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಗಮನ ವಹಿಸಲಿ.