ನ್ಯೂಸ್ ನಾಟೌಟ್ : ಖಾಸಗಿ ಆಸ್ಪತ್ರೆಯ ವೈದ್ಯರು ಮಾಡಿದ ಮಹಾ ಯಡವಟ್ಟಿಗೆ ಬಾಲಕನೊಬ್ಬ (Medical Negligence) ನರಳಿ ನರಳಿ ಪ್ರಾಣ ಬಿಟ್ಟಿರುವ ಘಟನೆ ಬೆಂಗಳೂರಿನಿಂದ ವರದಿಯಾಗಿದೆ. ಈತ ಬರೋಬ್ಬರಿ 6 ವರ್ಷ ಕೋಮಾದಲ್ಲಿದ್ದು ನರಕ ಯಾತನೆ ಅನುಭವಿಸಿ ಈಗ ಬಾರದ ಲೋಕಕ್ಕೆ ತೆರಳಿದ್ದಾನೆ. ವಿಘ್ನೇಶ್ (20) ಕೊನೆಯುಸಿರೆಳೆದ ಯುವಕ.
ವಿಘ್ನೇಶ್ ಹರ್ನಿಯಾ ಚಿಕಿತ್ಸೆಗೆಂದು ಸುಬ್ರಹ್ಮಣ್ಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಿದ್ದ. 2017ರ ಏಪ್ರಿಲ್ 4ರಂದು ವಿಘ್ನೇಶ್ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆ ಸಮಯದಲ್ಲಿ ಮೂರು ಬಾರಿ ಅನಸ್ತೇಷಿಯ ನೀಡಿದ್ದಾರೆ. ಅನಸ್ತೇಷಿಯ ನೀಡಿದಾಗಿನಿಂದ ವಿಘ್ನೇಶ್ ಪ್ರಜ್ಞೆಯನ್ನೇ ಕಳೆದುಕೊಂಡಿದ್ದ. ಅದೇ ಕ್ಷಣದಿಂದ ಕೋಮಾಗೂ ಜಾರಿದ್ದ.
ಕುಟುಂಬಸ್ಥರು ಘಟನೆ ಸಂಬಂಧ ಬನಶಂಕರಿ ಪೊಲೀಸರಿಗೆ ದೂರನ್ನು ನೀಡಿದ್ದರು. ಈ ವೇಳೆ ಚಿಕಿತ್ಸೆ ವೆಚ್ಚ ಭರಿಸುವುದಾಗಿ ವೈದ್ಯರು ಹೇಳಿದ್ದರು. ಕುಟುಂಬಸ್ಥರು ಚಿಕಿತ್ಸೆಗೆಂದು 19 ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಐದು ಲಕ್ಷ ರೂ. ನೀಡಿ ಕೈತೊಳೆದುಕೊಂಡಿದೆ. ಉಳಿದ ಚಿಕಿತ್ಸಾ ವೆಚ್ಚ ಕೂಡ ನೀಡದೆ ಬೆ*ದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
6 ವರ್ಷಗಳ ಕೋಮಾದಲ್ಲಿದ್ದ ವಿಘ್ನೇಶ್ 2024 ಜನವರಿ 3ರಂದು ದುರಂತ ಅಂತ್ಯ ಕಂಡಿದ್ದಾನೆ. ಆಸ್ಪತ್ರೆ ವೈದ್ಯರ ಯಡವಟ್ಟು ಸಂಬಂಧ ಪೋಷಕರು ಮತ್ತೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.