ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಕಾರ್ಯಕ್ರಮವೊಂದರಲ್ಲಿ ಮಕ್ಕಳ ಬಗ್ಗೆ ಹೇಳಿಕೆ ಕೊಟ್ಟಿರುವ ವಿಡಿಯೋವೊಂದು ಭಾರಿ ವೈರಲ್ ಆಗಿತ್ತು.ಇದಕ್ಕೆ ಪರ ವಿರೋಧದ ಚರ್ಚೆಯೂ ಕೇಳಿ ಬಂದಿತ್ತು.ಇದೀಗ ರಾಜಸ್ಥಾನದ ಬಿಜೆಪಿ ನಾಯಕ ಹಾಗೂ ಬುಡಕಟ್ಟು ಪ್ರದೇಶಾಭಿವೃದ್ಧಿ ಸಚಿವ ಬಾಬುಲಾಲ್ ಖಾರಾಡಿ ಅವರ ಹೇಳಿಕೆಯೊಂದು ಭಾರಿ ವಿವಾದವನ್ನೇ ಎಬ್ಬಿಸಿದೆ.
”ನೀವು ಹೆಚ್ಚೆಚ್ಚು ಮಕ್ಕಳನ್ನು ಮಾಡ್ಕೊಳ್ಳಿ. ಪ್ರಧಾನಿ ಮೋದಿ ಅವರು ನಿಮಗೆ ಮನೆ ಕಟ್ಟಿಸಿಕೊಡ್ತಾರೆ, ಆಹಾರ ಧಾನ್ಯಗಳನ್ನು ಪೂರೈಸುವ ವ್ಯವಸ್ಥೆ ಮಾಡ್ತಾರೆ. ಮಕ್ಕಳ ಭವಿಷ್ಯದ ಚಿಂತೆಬಿಡಿ…” ಹೀಗೆ ಹೇಳಿದ್ದು, ಇದಕ್ಕೆ ಪ್ರತಿಪಕ್ಷಗಳು ಕಿಡಿಕಾರಿವೆ.ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೇಗೆ ಮಾತನಾಡಬೇಕು ಎಂಬ ವಿವೇಕ ಸಚಿವರಿಗಿಲ್ಲ ಎಂದು ಹೇಳಿವೆ.
ಉದಯಪುರದ ನಯ್ ಗ್ರಾಮದಲ್ಲಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಶಿಬಿರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ ಸೇರಿದಂತೆ ಅನೇಕ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಸಿಎಂ ಅವರ ಸಮ್ಮುಖದಲ್ಲೇ ಸಚಿವ ಖಾರಾಡಿ, ” ತಲೆ ಮೇಲೊಂದು ಸೂರು ಇಲ್ಲದೇ ಹಸಿವಿನಿಂದ ಯಾರೂ ಮಲಗಬಾರದು ಎಂಬುದು ಪ್ರಧಾನಿ ಮೋದಿ ಅವರ ಕನಸು. ಹಾಗಾದರೆ ಇನ್ನೇಕೆ ನೀವು ಚಿಂತಿಸುವಿರಿ. ಹೆಚ್ಚೆಚ್ಚು ಮಕ್ಕಳಿಗೆ ಜನ್ಮನೀಡಿ, ಮೋದಿ ಮನೆ ಕಟ್ಟಿಸಿಕೊಡ್ತಾರೆ, ಅವರಿಗೆ ಅಧಿಕ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಸುತ್ತಾರೆ” ಎಂದು ಹೇಳಿದ್ದಾರೆ.
ಖಾರಾಡಿ ಅವರು ಹೀಗೆ ಹೇಳಿಕೆ ನೀಡುತ್ತಿದ್ದಂತೆಯೇ ಸಭೆಯಲ್ಲಿದ್ದ ಅನೇಕರು ಮುಸಿ ಮುಸಿ ನಗೋದಕ್ಕೆ ಆರಂಭ ಮಾಡಿದ್ದಾರೆ.ಸದ್ಯ ಈ ವಿಡಿಯೋ ಕೂಡ ಭಾರಿ ವೈರಲ್ ಆಗಿದೆ.ಪಕ್ಷದ ನಾಯಕರು ಒಬ್ಬರಿಗೊಬ್ಬರು ಮುಖ ನೋಡಿಕೊಂಡು ಮುಜುಗರದಿಂದ ತಲೆ ತಗ್ಗಿಸಿದರು.ಕೇಂದ್ರ ಸರ್ಕಾರವು ಎಲ್ಪಿಜಿ ಸಿಲಿಂಡರ್ ದರವನ್ನು 200ರಷ್ಟು ತಗ್ಗಿಸಿದೆ. ರಾಜಸ್ಥಾನದಲ್ಲಿನ ಬಿಜೆಪಿ ಸರ್ಕಾರವು ಉಜ್ವಲ ಯೋಜನೆ ಅಡಿಯಲ್ಲಿ ಜನರಿಗೆ 450 ರೂ.ಗೆ ಸಿಲಿಂಡರ್ ಸಿಗುವಂತೆ ಮಾಡುತ್ತಿದೆ ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಸಚಿವ ಖಾರಾಡಿ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದು ಜನತೆಗೆ ಮನವಿ ಮಾಡಿಕೊಂಡರು. ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಸಾಕಷ್ಟು ಸಾರ್ವಜನಿಕ ಕಲ್ಯಾಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
2023ರ ಚುನಾವಣೆಯಲ್ಲಿ ಜಾದೋಲ್ ಕ್ಷೇತ್ರದಿಂದ ಸ್ಪರ್ಧಿಸಿ ನಾಲ್ಕನೇ ಬಾರಿ ಖಾರಾಡಿ ಶಾಸಕರಾದರು.ಇವರಿಗೆ ಇಬ್ಬರು ಪತ್ನಿಯರಿದ್ದು, 8 ಮಕ್ಕಳನ್ನು ಹೊಂದಿದ್ದಾರೆ. ಇಡೀ ಕುಟುಂಬ ಉದಯಪುರ ಸಮೀಪದ ನೀಚ್ಲಾಥಾಲಾ ಎಂಬ ಗ್ರಾಮದಲ್ಲಿ ವಾಸಿಸುತ್ತಿದೆ. ಉದಯಪುರದ ಕೋಡ್ತಾದಲ್ಲಿ 1967ರಲ್ಲಿ ಜನಿಸಿದ ಇವರಿಗೆ ಇದೀಗ 56 ವರ್ಷ. ಕಾಂಗ್ರೆಸ್ನ ಹೀರಾಲಾಲ್ ದಾರಂಗಿ ವಿರುದ್ಧ ಸುಮಾರು 6 ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದರು.