ನ್ಯೂಸ್ ನಾಟೌಟ್ : ಪ್ಲಾಸ್ಟಿಕ್ ಮುಕ್ತ ಶಬರಿಮಲೆಗೆ ಟ್ರಾವಂಕೋರ್ ದೈವಸ್ವಂ ಮಂಡಳಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಪ್ಲಾಸ್ಟಿಕ್ ಬಾಟಲ್ಗಳ ಮಾರಾಟ, ಪ್ಲಾಸ್ಟಿಕ್ ಬಾಟಲ್ಗಳಲ್ಲಿ ನೀರಿನ ಬಳಕೆ, ಪಿಇಟಿ ಬಾಟಲ್ಗಳು,ಪ್ಲಾಸ್ಟಿಕ್ ಆಟಿಕೆಗಳು ಹಾಗೂ ಪ್ಲಾಸ್ಟಿಕ್ ತಟ್ಟೆ ಲೋಟಗಳ ಬಳಕೆ ನಿಲ್ಲಿಸುವ ಜೊತೆಯಲ್ಲೇ ಶಬರಿಮಲೆಯಲ್ಲಿ ಎಲ್ಲೆಂದರಲ್ಲಿ ಕಂಡು ಬರುವ ಪ್ಲಾಸ್ಟಿಕ್ ಕವರ್ ಸೇರಿದಂತೆ ಎಲ್ಲ ವಸ್ತುಗಳನ್ನು ತೆರವು ಮಾಡಬೇಕೆಂದು ಕೇರಳ ಹೈಕೋರ್ಟ್ ಸೂಚನೆ ಕೊಟ್ಟಿದೆ.
ಇದೇ ವಿಚಾರವಾಗಿ ಕೇರಳ ಪೊಲೀಸ್, ಜಿಲ್ಲಾಡಳಿತ ಹಾಗೂ ಪಂಚಾಯತ್ಗೂ ನಿರ್ದೇಶನ ನೀಡಿರುವ ಕೇರಳ ಹೈಕೋರ್ಟ್, ಪ್ಲಾಸ್ಟಿಕ್ ವಸ್ತುಗಳ ಮಾರಾಟ ನಿಲ್ಲಿಸುವ ಜೊತೆಯಲ್ಲೇ ಮಣ್ಣಿಗೆ ಪ್ಲಾಸ್ಟಿಕ್ ವಸ್ತುಗಳು ಸೇರದಂತೆ ನೋಡಿಕೊಳ್ಳಬೇಕೆಂದೂ ತಾಕೀತು ಮಾಡಿದೆ.ಕೇರಳ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಜಸ್ಟೀಸ್ ಅನಿಲ್ ಕೆ. ನರೇಂದ್ರನ್ ಹಾಗೂ ಜಸ್ಟೀಸ್ ಜಿ. ಗಿರೀಶ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಮಾತ್ರವಲ್ಲ, ಬೆಟ್ಟ ಹತ್ತುವ ಹಾದಿ, ಸ್ನಾನ ಘಟ್ಟ ಸೇರಿದಂತೆ ಎಲ್ಲೆಡೆ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸುವಂತೆಯೂ ಕೇರಳ ಹೈಕೋರ್ಟ್ ಸೂಚನೆ ನೀಡಿದೆ.ಪ್ರವಾಸಿ ತಾಣಗಳು, ತೀರ್ಥ ಕ್ಷೇತ್ರಗಳಿಗೆ ಬರುವ ಭಕ್ತರು ಎಗ್ಗಿಲ್ಲದೆ ಪ್ಲಾಸ್ಟಿಕ್ ವಸ್ತುಗಳನ್ನ ಬಳಸುತ್ತಾರೆ. ಪ್ಲಾಸ್ಟಿಕ್ ಕವರ್ಗಳನ್ನು ಕಸದ ಬುಟ್ಟಿಗೆ ಹಾಕುವ ಬದಲು ಬೆಟ್ಟದಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಹೀಗಾಗಿ, ಪ್ಲಾಸ್ಟಿಕ್ ಮಣ್ಣು ಸೇರುವ ಜೊತೆಯಲ್ಲೇ ವನ್ಯ ಜೀವಿಗಳ ಹೊಟ್ಟೆ ಸೇರುವ ಅಪಾಯವೂ ಇದೆ. ಹೀಗಾಗಿ, ಶಬರಿಮಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಜೊತೆಯಲ್ಲೇ ಇಲ್ಲಿನ ಪರಿಸರ, ವನ್ಯ ಜೀವಿಗಳ ರಕ್ಷಣೆ ನಿಟ್ಟಿನಲ್ಲೂ ಹೈಕೋರ್ಟ್ ವಿಶೇಷ ಗಮನ ನೀಡಿದೆ. ವಿಪರ್ಯಾಸವೆಂದರೆ, 2016 ರಿಂದಲೂ ಕೇರಳ ಹೈಕೋರ್ಟ್ ಇದೇ ರೀತಿಯ ಹಲವು ನಿರ್ದೇಶನಗಳನ್ನು ನೀಡಿದ್ದು, ಇದರ ಸಮರ್ಪಕ ಜಾರಿಯಲ್ಲಿ ತೊಡಕು ಎದುರಾಗುತ್ತಿದೆ.