ನ್ಯೂಸ್ ನಾಟೌಟ್ : ಗೋವಾದ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ನಾಲ್ಕು ವರ್ಷದ ಮಗನ ಕೊಂದು ಚಿತ್ರದುರ್ಗದಲ್ಲಿ ಸಿಕ್ಕಿಬಿದ್ದ ಬೆಂಗಳೂರಿನ ಕಂಪೆನಿಯ ಸಿಇಒ ಸುಚನಾ ಸೇಥ್ ಕೃತ್ಯಕ್ಕೆ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ.ಇಷ್ಟು ಸಮಯ ಪತಿ ಜತೆ ಮಗು ಮಾತನಾಡುವುದು ಇಷ್ಟವಿರಲಿಲ್ಲ ಇದಕ್ಕಾಗಿ ಈ ಕೃತ್ಯವೆಸಗಿದೆ ಎಂದಾಕೆ, ಬಳಿಕ ನಾನು ಪ್ರಜ್ಞೆ ತಪ್ಪಿಸಲು ಯತ್ನಿಸಿದ್ದೆ ಎಂದಿದ್ದಳು.ಇದೀಗ ನಾನು ಮಗುವನ್ನು ಸಾಯಿಸಿಲ್ಲ ಎನ್ನುವ ಮೂಲಕ ಬೆಚ್ಚಿ ಬೀಳಿಸುವಂತೆ ಮಾಡಿದ್ದಾಳೆ.
ಕೃತಕ ಬುದ್ದಿಮತ್ತೆ ಕಂಪೆನಿ ನಡೆಸುತ್ತಿರುವ ಸುಚನಾ, ನಾಲ್ಕು ವರ್ಷದ ಮಗನ ಉಸಿರು ಚೆಲ್ಲಿಸಲೆಂದು ಸಾಕಷ್ಟು ತಯಾರಿ ನಡೆಸಿದ್ದಾರೆ ಎಂಬ ಅನುಮಾನ ಮೂಡಿದೆ. ಮಗನೊಂದಿಗೆ ಸುಚನಾ ಉಳಿದುಕೊಂಡಿದ್ದ ಹೋಟೆಲ್ ಕೊಠಡಿಯನ್ನು ತಪಾಸಣೆ ನಡೆಸಿದ ಗೋವಾ ಪೊಲೀಸರಿಗೆ ಇದೀಗ ಕೆಮ್ಮಿನ ಸಿರಪ್ನ ಖಾಲಿ ಬಾಟಲಿಗಳು ದೊರಕಿವೆ. ಕೃತ್ಯಕ್ಕೂ ಮುನ್ನ ಮಗನಿಗೆ ಹೆವಿ ಡೋಸ್ ಸಿರಪ್ ಕುಡಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಮಗುವನ್ನು ಬಟ್ಟೆ ಅಥವಾ ದಿಂಬಿನಿಂದ ಉಸಿರುಗಟ್ಟಿಸಿರಬಹುದು ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.ಗೋವಾದ ಕ್ಯಾಂಡೋಲಿಮ್ ಅಪಾರ್ಟ್ಮೆಂಟ್ನಲ್ಲಿ ಮಗನನ್ನು ಇನ್ನಿಲ್ಲವಾಗಿಸಿದ್ದ ಪಶ್ಚಿಮ ಬಂಗಾಳ ಮೂಲದ ಸುಚನಾ, ದೇಹವನ್ನು ಚೀಲದಲ್ಲಿ ತುಂಬಿಸಿ ಟ್ಯಾಕ್ಸಿ ಮೂಲಕ ಬೆಂಗಳೂರಿಗೆ ಹೊರಟಿದ್ದರು. ಆದರೆ ಅದಕ್ಕೂ ಮುನ್ನ ಚಿತ್ರದುರ್ಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಕೊಠಡಿಯಲ್ಲಿ ತಪಾಸಣೆ ನಡೆಸಿದ ಪೊಲೀಸರಿಗೆ ಒಂದು ಚಿಕ್ಕ ಹಾಗೂ ಇನ್ನೊಂದು ದೊಡ್ಡ ಗಾತ್ರದ ಎರಡು ಕೆಮ್ಮಿನ ಸಿರಪ್ನ ಖಾಲಿ ಬಾಟಲಿಗಳು ದೊರಕಿದ್ದು, ಪೊಲೀಸರ ತಲೆ ನೋವಿಗೂ ಕಾರಣವಾಗಿದೆ. “ಮಗುವಿನ ದೇಹದ ಮರಣೋತ್ತರ ಪರೀಕ್ಷೆಯು, ಉಸಿರುಗಟ್ಟಿಸಿ ಕೊಂದಿರುವ ಸಾಧ್ಯತೆಯನ್ನು ಸೂಚಿಸಿದೆ. ಮಗು ಒದ್ದಾಡಿದ ಯಾವ ಸೂಚನೆಯೂ ಇಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಮಗುವನ್ನು ಸಾಯಿಸುವುದಕ್ಕೂ ಮುನ್ನ ಮಹಿಳೆ ಅವನಿಗೆ ಭಾರಿ ಡೋಸ್ನ ಕೆಮ್ಮಿನ ಸಿರಪ್ ನೀಡಿರುವ ಸಾಧ್ಯತೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ತಮಗೆ ಕೆಮ್ಮು ಇರುವುದರಿಂದ ಸಣ್ಣ ಬಾಟಲಿಯ ಸಿರಪ್ ತಂದುಕೊಡುವಂತೆ ಸುಚನಾ ತಮಗೆ ಕೇಳಿದ್ದಾಗಿ ಅಪಾರ್ಟ್ಮೆಂಟ್ ಸಿಬ್ಬಂದಿ ತಿಳಿಸಿದ್ದಾರೆ. ದೊಡ್ಡ ಬಾಟಲಿಯನ್ನು ಅವರೇ ತಂದಿರುವ ಸಾಧ್ಯತೆ ಇದೆ. ಇದು ಪೂರ್ವನಿಯೋಜಿತ ಕೊಲೆಯ ರೀತಿ ಕಾಣಿಸುತ್ತಿದೆ ಎಂದಿದ್ದಾರೆ. ಆದರೆ ತಾವು ಕೊಲೆ ಮಾಡಿಲ್ಲ ಎಂದು ಸುಚನಾ ವಾದಿಸಿದ್ದಾರೆ. ತಾವು ನಿದ್ದೆಯಿಂದ ಏಳುವ ಹೊತ್ತಿಗೆ ಮಗು ಸತ್ತು ಹೋಗಿತ್ತು ಎಂದು ಹೇಳಿದ್ದಾರೆ.”ನಾವು ಅವರ ವಾದವನ್ನು ಪರಿಗಣಿಸಿಲ್ಲ. ಹೆಚ್ಚಿನ ತನಿಖೆಯಿಂದ ಮಗುವಿನ ಕೊಲೆ ಹಿಂದಿನ ಉದ್ದೇಶ ಬೆಳಕಿಗೆ ಬರಲಿದೆ. ಸುಚನಾ ಮತ್ತು ಅವರ ಗಂಡ ಬೇರ್ಪಟ್ಟಿದ್ದು, ಮಗನನ್ನು ಗಂಡನ ಜತೆ ಬಿಡಬೇಕೆಂಬ ಕೋರ್ಟ್ ಆದೇಶವನ್ನು ಪಾಲಿಸಬೇಕಾದ ಕಾರಣಕ್ಕೆ ಆಕೆ ಈ ಕೃತ್ಯ ಎಸಗಿರಬಹುದು” ಎಂದು ಶಂಕಿಸಿದ್ದಾರೆ.