ನ್ಯೂಸ್ ನಾಟೌಟ್: ಜನವರಿ 22 ರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಅಯೋಧ್ಯೆಯ ರಾಮಮಂದಿರದಲ್ಲಿ ಮೊದಲ ಚಿನ್ನದ ಬಾಗಿಲನ್ನು ಜ.9 ರಂದು ಅಳವಡಿಸಲಾಗಿದೆ.
ಈ ಬಾಗಿಲು ಸುಮಾರು 12 ಅಡಿ ಎತ್ತರ ಮತ್ತು 8 ಅಡಿ ಅಗಲವಿದೆ. ಮುಂದಿನ ಮೂರು ದಿನಗಳಲ್ಲಿ ಇನ್ನೂ 13 ಬಾಗಿಲುಗಳನ್ನು ಅಳವಡಿಸಲಾಗುವುದು ಎಂದು ತಿಳಿದು ಬಂದಿದೆ. ಗರ್ಭಗುಡಿಯ ಮೇಲಿನ ಮಹಡಿಯಲ್ಲಿ ಈ ಬಾಗಿಲುಗಳನ್ನು ಅಳವಡಿಸಲಾಗುತ್ತಿದ್ದು, ರಾಮ ಮಂದಿರದಲ್ಲಿ ಒಟ್ಟು 46 ಬಾಗಿಲುಗಳನ್ನು ಅಳವಡಿಸಲಾಗಿದೆ. ಈ ಪೈಕಿ 42ಕ್ಕೆ 100 ಕೆಜಿ ಚಿನ್ನದ ಲೇಪನ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಮುಂಜಾನೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನವಾದ ಜನವರಿ 22 ರಂದು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದಾರೆ. ಈ ಸಂದರ್ಭವನ್ನು ‘ರಾಷ್ಟ್ರೀಯ ಹಬ್ಬ’ ಎಂದು ಕರೆದ ಮುಖ್ಯಮಂತ್ರಿ ಯೋಗಿ, ಈ ಸಂದರ್ಭಕ್ಕಾಗಿ ಸರ್ಕಾರಿ ಕಟ್ಟಡಗಳನ್ನು ಅಲಂಕರಿಸಬೇಕು ಎಂದು ಸೂಚನೆ ನೀಡಿದರು.
ಮಂಗಳವಾರ ಅಯೋಧ್ಯೆಗೆ 2024 ರ ಮೊದಲ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ‘ಕುಂಭ ಮಾದರಿಯ ಸ್ವಚ್ಛತೆ’ಯನ್ನು ಜಾರಿಗೆ ತರಲು ಮತ್ತು ‘ರಾಮನಗರಿ’ ಅತ್ಯಂತ ಸ್ವಚ್ಛ ಮತ್ತು ಸುಂದರ ನಗರವಾಗಿ ಕಾಣಿಸಿಕೊಳ್ಳಬೇಕು. ರಸ್ತೆಗಳಲ್ಲಿ ಧೂಳು ಕಾಣಿಸಬಾರದು, ಶೌಚಾಲಯಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಗತಿಯಲ್ಲಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನವರಿ 22 ರ ನಂತರ ಭಕ್ತಾದಿಗಳು ಮತ್ತು ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ನಿರೀಕ್ಷಿಸಲಾಗಿರುವುದರಿಂದ ಉತ್ತಮ ಗುಣಮಟ್ಟದ ಮತ್ತು ನಿಗದಿತ ಕಾಲಮಿತಿಯೊಳಗೆ ಕಾರ್ಯಗಳನ್ನು ನಿರ್ವಹಿಸುವ ಅಗತ್ಯವಿದೆ ಎಂದು ಸಿಎಂ ಯೋಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.