ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ನಿರ್ಮಾಣ ಆಗುವವರೆಗೆ ಒಂದು ಮಾತನ್ನೂ ಆಡುವುದಿಲ್ಲ ಎಂದು ಸರಸ್ವತಿ ದೇವಿ ಕಳೆದ 30 ವರ್ಷಗಳ ಹಿಂದೆ ಪ್ರಮಾಣ ಮಾಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಅವರು ಕಳೆದ 30 ವರ್ಷಗಳಿಂದ ಮೌನ ವ್ರತ ಆಚರಿಸಿದ್ದಾರೆ. ಇದೇ ಜನವರಿ 22 ರಂದು ಅವರ ಮೌನ ವ್ರತ ಅಂತ್ಯವಾಗಲಿದೆ ಎಂದು ಹೇಳಲಾಗಿದೆ.
ಕೆಲವೇ ದಿನಗಳಲ್ಲಿ ಅಂದರೆ ಜನವರಿ 22ರಂದು ರಾಮಮಂದಿರ (Ram Mandir) ಉದ್ಘಾಟನೆಯಾಗಲಿದೆ. ಸರಸ್ವತಿ ದೇವಿ ಎಂಬ ಮಹಿಳೆ ಕಳೆದ 30 ವರ್ಷಗಳಿಂದ ಆಚರಿಸುತ್ತ ಬಂದಿರುವ ಕಠಿಣ ವ್ರತ ಅಂತ್ಯವಾಗುವ ಸಮಯ ಬಂದಿದೆ ಎನ್ನಲಾಗುತ್ತಿದೆ.
ಸರಸ್ವತಿ ದೇವಿ ಜಾರ್ಖಂಡ್ ಮೂಲದವರು ಎನ್ನಲಾಗಿದ್ದು, 1992ರ ಡಿಸೆಂಬರ್ 6 ರಂದು ರಾಮಲಲ್ಲಾ ಜನ್ಮಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸುವವರೆಗೆ ತನ್ನ ಬಾಯಿಂದ ಒಂದು ಮಾತನ್ನೂ ಆಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಈ ಪ್ರತಿಜ್ಞೆ ಮೂಲಕವೇ ಸರಸ್ವತಿ ದೇವಿ ‘‘ಮೌನಿ ಮಾತೆ’ ಎಂದೂ ಜನಪ್ರಿಯರಾಗಿದ್ದರು. ಬಾಬ್ರಿ ಮಸೀದಿ ಧ್ವಂಸದ ದಿನದಂದು ಪ್ರತಿಜ್ಞೆ ಕೈಕೊಂಡಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ದಿನ ತಮ್ಮ ವ್ರತ ಕೈಬಿಡಲಾಗುವುದು ಎಂದು ತಿಳಿಸಿದ್ದರು.
ಮೌನ ವ್ರತ ಕೈಗೊಂಡಿದ್ದ ಸರಸ್ವತಿ ದೇವಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಮತ್ತು ನೆರೆಹೊರೆಯ ಜನರೊಟ್ಟಿಗೆ ಮಾತನಾಡಲು ಸಂಕೇತ ಭಾಷೆ ಬಳುತ್ತಿದ್ದರು. ಸಂಜ್ಞೆಯ ಮೂಲಕ ಇತರರೊಂದಿಗೆ ಸಂವಹನ ನಡೆಸುತ್ತಿದ್ದರು. 2020 ರ ವರೆಗೆ ಅವರು ತಮ್ಮ ಮೌನ ವ್ರತದಿಂದ ಪ್ರತಿದಿನ ಮಧ್ಯಾಹ್ನ ಒಂದು ಗಂಟೆ ವಿರಾಮ ತೆಗೆದುಕೊಂಡು ಮಾತನಾಡುತ್ತಿದ್ದರು.
ಆದರೆ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರದ ಶಂಕುಸ್ಥಾಪನೆ ನೆರವೇರಿಸಿದ ದಿನದಿಂದ ಸಂಪೂರ್ಣವಾಗಿ ಮೌನವಾಗಿದ್ದಾರೆ ಎನ್ನಲಾಗಿದೆ. ಅಂದಿನಿಂದ ಇಂದಿನವರೆಗೂ ಒಂದು ಮಾತನ್ನೂ ಆಡಿಲ್ಲ. ಅಂದಿನಿಂದ ಇಂದಿನವರೆಗೂ ಅವರು ಸಂಪೂರ್ಣ ಮೌನವಾಗಿದ್ದಾರೆ ಎಂದು ವರದಿ ತಿಳಿಸಿದೆ.
ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸರಸ್ವತಿ ದೇವಿಯನ್ನು ಆಹ್ವಾನಿಸಿದ್ದಾರೆ ಎನ್ನಲಾಗದೆ.