ನ್ಯೂಸ್ ನಾಟೌಟ್ : ಕೊಡಗಿನಲ್ಲಿ ಅಪರೂಪದ ಪಾಂಡವರ ಕಾಲದ್ದು ಎನ್ನಲಾದ ಬೃಹತ್ ಗಾತ್ರದ ಶಿವಲಿಂಗ ಪತ್ತೆಯಾಗಿದೆ.4 ಅಡಿ ಎತ್ತರದ ಬೃಹತ್ ಗಾತ್ರದ ಶಿವಲಿಂಗವೊಂದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಕುಂದ ಗ್ರಾಮದಲ್ಲಿ ದೊರೆತಿದ್ದು,ಭಾರಿ ಅಚ್ಚರಿಗೆ ಕಾರಣವಾಗಿದೆ.ಇದನ್ನ ವೀಕ್ಷಿಸಲೆಂದು ನೂರಾರು ಮಂದಿ ಇಲ್ಲಿಗೆ ಆಗಮಿಸಿದ್ದಾರೆ.
ಕಿಲನ್ ಗಣಪತಿ ಎಂಬುವರ ತೋಟದಲ್ಲಿ ಪುರಾತನ ಲಿಂಗ ಮತ್ತು ಇತರೆ ವಸ್ತುಗಳು ದೊರೆತಿರುವುದು ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಕೆಲವು ದಿನಗಳ ಹಿಂದೆ ಕಲ್ಯಾಟಂಡ ಅಜ್ಜಪ್ಪನವರು, ದರ್ಶನ್ ನಂಜಪ್ಪ ಅವರ ತೋಟದಲ್ಲಿ ಭೂಮಿಯೊಳಗೆ ಶಿವಲಿಂಗವಿದೆ ಎಂದು ಹೇಳಿದ್ದರಂತೆ. ಅವರ ಮಾತಿನಂತೆ ತೋಟದೊಳಗೆ ಮರವೊಂದರ ಸುತ್ತ ಕಟ್ಟೆಯಂತಿರುವ ಜಾಗವನ್ನು ಅಗೆಸಿದ್ದಾರೆ.ಆದರೆ ಅವರಿಗೂ ಏನು ಲಭ್ಯವಾಗಿರಲಿಲ್ಲ.ಕೊನೆಗೆ ಬೃಹತ್ ಮರವನ್ನು ಜೆಸಿಬಿ ಬಳಸಿ ಬುಡ ಸಮೇತ ಅಗೆಸಿದಾಗ ಮರದ ಬುಡದ ಆಳದಲ್ಲಿ ಬೃಹತ್ ಶಿವಲಿಂಗ ಪತ್ತೆಯಾಗಿದೆ.ಇದು ಅಲ್ಲಿನ ಗ್ರಾಮಸ್ಥರನ್ನೇ ಬೆರಗುಗೊಳಿಸಿದೆ.
ಸುಮಾರು 800 ವರ್ಷಗಳ ಇತಿಹಾಸವುಳ್ಳ ಗುಮ್ಮಟ್ಟಿರ ಕುಟುಂಬದ ಜಾಗದಲ್ಲಿ ಈ ಶಿವಲಿಂಗ ಪತ್ತೆಯಾಗಿದ್ದು,ಶಿವಲಿಂಗ ಅಪಾರ ಶಕ್ತಿಯನ್ನು ಹೊಂದಿದೆ ಎಂದು ಹಿರಿಯ ಅರ್ಚಕ ಹಾಗೂ ಗುಮ್ಮಟ್ಟಿರ ಕುಟುಂಬದ ಹಿರಿಯರು ಅಭಿಪ್ರಾಯಿಸಿದ್ದಾರೆ. ಶಿವಲಿಂಗದ ಜೊತೆಗೆ ತೀರ್ಥನಳ, ಆನೆಸ್ತಂಭ, ಕಲ್ಲಿನ ಇಟ್ಟಿಗೆಗಳು, ಸೋಮಸೂತ್ರ ಹಾಗೂ ಪಾಣಿಪೀಠ ಸೇರಿದಂತೆ ಲಿಂಗದ ಕೆಳಗೆ ಹಾಸಿದ್ದ ಚಪ್ಪಡಿ ಕಲ್ಲುಗಳು ದೊರೆತಿವೆ ಎಂದು ತಿಳಿದು ಬಂದಿದೆ.
ಇತಿಹಾಸ ಪ್ರಸಿದ್ಧ ಕುಂದ ಬೆಟ್ಟದ ಈಶ್ವರ ದೇವಾಲಯದಿಂದ ಅಣತಿ ದೂರದಲ್ಲಿಯೇ ಈ ಶಿವಲಿಂಗ ಪತ್ತೆಯಾಗಿರುವುದು ಹಲವು ಚಿಂತನೆಗಳಿಗೆ ಕಾರಣವಾಗಿದೆ.ಪಾಂಡವರು ಈ ಭಾಗದಲ್ಲಿ ಸಂಚರಿಸುತ್ತಿದ್ದ ವೇಳೆ ಶಿವನ ಪೂಜೆಗಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಿರಬಹುದು ಎಂದು ಶಿಲ್ಪಿ ಶಿವಕುಮಾರ್ ಹೇಳಿದ್ದಾರೆ.ಈ ಕುರಿತು ಮಾತನಾಡಿರುವ ದರ್ಶನ ನಂಜಪ್ಪ ಮರದ ಬುಡದ ಆಳದಲ್ಲಿ ದೊರೆತಿರುವ ಶಿವಲಿಂಗ, ಪಾಣಿಪೀಠ ಸೇರಿದಂತೆ ಇತರೆ ವಸ್ತುಗಳನ್ನು ಸದ್ಯ ಒಂದೆಡೆ ರಕ್ಷಿಸಿ ಇಟ್ಟಿದ್ದೇವೆ. ಶಿವಲಿಂಗದ ಒಂದು ಭಾಗಕ್ಕೆ ಹಿಂದೆಯೇ ಹಾನಿಯಾಗಿದೆ.
ಹಿಂದಿನ ಕಾಲದಲ್ಲಿ ಬಿಳಿ ಕಲ್ಲಿನಿಂದ ಹಾಗೂ ಕಾಡುಕಲ್ಲುಗಳಿಂದ ಶಿವಲಿಂಗ ಮಾಡುತ್ತಿದ್ದರು. ಅದೇ ಕಲ್ಲುಗಳನ್ನು ಬಳಸಿ ಶಿವಲಿಂಗ ಮಾಡಿರುವುದು ಗೊತ್ತಾಗಿದೆ. ಕೊಡಗು ಹಿಂದೆ ಪ್ರತ್ಯೇಕ ರಾಜ್ಯವಾಗಿದ್ದ ಸಂದರ್ಭದಲ್ಲಿ ಅದನ್ನು ಲಿಂಗಾಯಿತ ರಾಜರು ಆಳ್ವಿಕೆ ಮಾಡುತ್ತಿದ್ದರು. ಹೀಗಾಗಿ ಆ ಸಂದರ್ಭದಲ್ಲಿ ಏನಾದರೂ ಇದ್ದ ದೇವಾಲಯ ಶಿವಲಿಂಗವೇನಾದರೂ ಇರಬಹುದೇ ಎನ್ನುವ ಅನುಮಾನಗಳಿವೆ. ಇದನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ ಮಾಹಿತಿ ನೀಡಬೇಕಾಗಿದೆ.