ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪತ್ತೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು.ಇದೀಗ ಸುಳ್ಯದಲ್ಲಿಯೂ ಸುಮಾರು 5 ತಿಂಗಳ ಹಿಂದೆ ಕೊನೆಯುಸಿರೆಳೆದಿದ್ದಾರೆ ಎನ್ನಲಾದ ಅಸ್ಥಿಪಂಜರವೊಂದು ಪತ್ತೆಯಾಗಿದ್ದು,ಭಾರಿ ಚರ್ಚೆಗೆ ಕಾರಣವಾಗಿದೆ.
ಸುಳ್ಯದ ಎಡಮಂಗಲದ ಕಾರಂಜಿಗುಡ್ಡ ಎಂಬಲ್ಲಿ ಈ ಅಸ್ಥಿ ಪಂಜರ ಪತ್ತೆಯಾಗಿದೆ.ಸ್ಥಳೀಯರು ಸೊಪ್ಪಿಗೆಂದು ಗುಡ್ಡಕ್ಕೆ ಹೋಗಿದ್ದಾಗ ಈ ಅಸ್ಥಿಪಂಜರ ಅವರ ಕಣ್ಣಿಗೆ ಬಿದ್ದಿದೆ.ಬೆಚ್ಚಿ ಬಿದ್ದ ಅವರು ಕೂಡಲೇ ಅಲ್ಲಿಂದ ಮಾಹಿತಿ ಹಂಚಲು ಶುರು ಮಾಡಿದ್ದಾರೆ.ಬಳಿಕ ಐದು ತಿಂಗಳ ಹಿಂದೆ ಕಾಣೆಯಾಗಿದ್ದ ಬಾಲಕೃಷ್ಣ ಗೌಡ ಎಂಬವರ ಮನೆಗೂ ಈ ಮಾಹಿತಿಯನ್ನು ತಲುಪಿಸಿದ್ದಾರೆ.
ಒಂದು ಮಾಹಿತಿಯ ಪ್ರಕಾರ ಇದು ಐದು ತಿಂಗಳ ಹಿಂದೆ ಕಾಣೆಯಾಗಿದ್ದ ಬಾಲಕೃಷ್ಣ ಗೌಡರ ಅಸ್ಥಿಪಂಜರವಾಗಿರಬಹುದು ಎಂದು ಶಂಕಿಸಲಾಗಿದೆ.ಸ್ಥಳಕ್ಕೆ ಬಾಲಕೃಷ್ಣ ಗೌಡರ ಮನೆಯವರು ಆಗಮಿಸಿ ಅಸ್ಥಿಪಂಜರ ವೀಕ್ಷಿಸಿ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಅಸ್ಥಿಪಂಜರ ವೀಕ್ಷಿಸಿ ಸ್ಥಳೀಯರಿಂದ ಹಾಗೂ ಮನೆಯವರಿಂದ ಮಾಹಿತಿ ಪಡೆದುಕೊಂಡಿದ್ದು,ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈ ಬಗ್ಗೆ ಬಾಲಕೃಷ್ಣ ಗೌಡರ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಹುಶಃ ಮರದಿಂದ ಮರ ಕೆಸುವು ಸಂಗ್ರಹಿಸುವಾಗ ಬಿದ್ದು ಕೊನೆಯುಸಿರೆಳೆದರೇ ಅಥವಾ ಇನ್ಯಾವುದಾದರೂ ಕಾರಣಗಳಿಂದ ಉಸಿರು ಚೆಲ್ಲಿದ್ದಾರೆಯೇ ಎಂದು ಶಂಕೆ ವ್ಯಕ್ತವಾಗಿದೆ.ಕಾಡು ಪ್ರದೇಶವಾದ್ದರಿಂದ , ಜನರ ಓಡಾಟ ಕಡಿಮೆ ಇರೋದ್ರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಅವರು ಬಾರದ ಲೋಕಕ್ಕೆ ತೆರಳಿರಬಹುದೇ? ಎನ್ನುವ ಹಲವಾರು ಪ್ರಶ್ನೆಗಳಿದ್ದು, ಪೊಲೀಸ್ ತನಿಖೆಯಿಂದಷ್ಟೇ ನಿಖರವಾದ ಮಾಹಿತಿ ಹೊರ ಬರಬೇಕಿದೆ.