ನ್ಯೂಸ್ ನಾಟೌಟ್ :ರಾಜಕೀಯ ,ಕೋಮು ಸಂಘರ್ಷದ ಈ ಪರಿಸ್ಥಿತಿಯಲ್ಲಿ ಕೊಡಗಿನ ಮಸೀದಿಯೊಂದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ.ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳಿಗೆ (Ayyappa Devotees) ಮಸೀದಿಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕೊಟ್ಟು ಸೌಹಾರ್ದತೆಯನ್ನು (Religious Harmony) ಮೆರೆದಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ವೀರಾಜಪೇಟೆ ತಾಲೂಕಿನ ತಿತಿಮತಿ ಸಮೀಪದ ಎಡತ್ತರ ಗ್ರಾಮದ ಲಿವಾಉಲ್ ಹುದಾ ಜುಮಾ ಮಸೀದಿ ಹಾಗೂ ಮದರಸದಲ್ಲಿ ಮಸೀದಿಯ ಆಡಳಿತ ಆಡಳಿತ ಮಂಡಳಿಯವರು ಅಯ್ಯಪ್ಪ ಭಕ್ತರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದಾರೆ. ಈ ಮೂಲಕ ಸಂಕಷ್ಟಕ್ಕೆ ಸಿಲುಕಿದ ಶಬರಿಮಲೆಯ ಭಕ್ತರಿಗೆ ಆಶ್ರಯ ಮತ್ತು ಸೌಲಭ್ಯ ಕಲ್ಪಿಸುವ ಮೂಲಕ ಸಹೋದರತ್ವ ಮತ್ತು ಸಾಮರಸ್ಯದ ಕಥೆಗೆ ಸಾಕ್ಷಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ 5 ಮಂದಿ ಅಯ್ಯಪ್ಪ ವ್ರತಧಾರಿಗಳು ಮೋಟಾರ್ ಬೈಕ್ನಲ್ಲಿ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ರಾತ್ರಿ ವೀರಾಜಪೇಟೆ ತಾಲೂಕಿನ ತಿತಿಮತಿ ಸಮೀಪದ ಎಡತ್ತರ ಗ್ರಾಮಕ್ಕೆ ತಲುಪಿದ ಇವರುಗಳಿಗೆ ಮಳೆಯ ಹಾಗೂ ಕಾಡು, ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಈ ಪ್ರದೇಶ ಅಡ್ಡಿಯನ್ನುಂಟು ಮಾಡಿತು.ಹೀಗೆ ಮುಂದಕ್ಕೆ ಸಾಗಿದಾಗ ಅಲ್ಲಿ ಲಿವಾಉಲ್ ಹುದಾ ಜುಮಾ ಮಸೀದಿ ಹಾಗೂ ಮದರಸಾ ಕಾಣಸಿಕ್ಕಿದೆ. ಅಲ್ಲಿಗೆ ತೆರಳಿದ ಇವರುಗಳು ತಂಗಲು ಅವಕಾಶ ಕೇಳಿದ್ದಾರೆ.
ಈ ಸಂದರ್ಭ ಮಸೀದಿಯ ಅಧ್ಯಕ್ಷ ಉಸ್ಮಾನ್, ಖತೀಬ್ ಖಮರುದ್ದೀನ್ ಅನ್ವಾರಿ ಹಾಗೂ ಮಸೀದಿಯ ಪದಾಧಿಕಾರಿಗಳು ವ್ರತಧಾರಿಗಳ ಕೋರಿಕೆಗೆ ಸ್ಪಂದಿಸಿ ಎಲ್ಲಾ ಸೌಕರ್ಯವನ್ನು ಒದಗಿಸಿ ಮಸೀದಿ ಬಳಿಯಲ್ಲೇ ಪೂಜೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೆ ರಾತ್ರಿ ತಂಗಲು ಮದರಸದಲ್ಲಿ ಅವಕಾಶವನ್ನು ಕಲ್ಪಿಸಿದ್ದಾರೆ.ಬಳಿಕ ಅಲ್ಲಿಯೇ ತಂಗಿದ್ದ ವ್ರತಧಾರಿಗಳಾದ ಕಲಮೇಶ್ ಗೌರಿ, ಭೀಮಪ್ಪ ಸನಾದಿ, ಶಿವಾನಂದ ನವೇದಿ, ಗಂಗಾಧರ್ ಬಾಡಿಗೆ, ಸಿದ್ದರೋದ್ ಸನಾದಿ ಇವರುಗಳು ಬೆಳಿಗ್ಗೆ 6 ಗಂಟೆಗೆ ನಿತ್ಯದ ಪೂಜೆ ನೆರವೇರಿಸಿ ಮಸೀದಿಯವರಿಗೆ ಧನ್ಯವಾದ ಸಲ್ಲಿಸಿ ಶಬರಿಮಲೆಯತ್ತ ತೆರಳಿದ್ದಾರೆ.
ಎಡತ್ತರ ಮಸೀದಿಯಲ್ಲಿ ಯಾವುದೇ ಭಕ್ತರಿಗೆ ಜಾತಿ ಧರ್ಮದ ಭೇದವಿಲ್ಲದೆ ಇಲ್ಲಿ ಬೇಕಾದ ವ್ಯವಸ್ಥೆ ಕಲ್ಪಿಸಲು ನಾವು ಸಿದ್ಧರಿದ್ದೇವೆ. ರಾತ್ರಿ ವೇಳೆ ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಇದೆ. ಯಾತ್ರೆಗೆ ತೆರಳುವವರು ರಾತ್ರಿ ವೇಳೆ ಇಲ್ಲಿಯೇ ಉಳಿದುಕೊಂಡು ಬೆಳಿಗ್ಗೆ ಯಾತ್ರೆ ಕೈಗೊಳ್ಳಬಹುದು ಅವರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ನಾವು ಇಲ್ಲಿ ಕಲ್ಪಿಸಿಕೊಡುತ್ತೇವೆ. ಎಲ್ಲಾ ದೇವರು ಒಂದೇ, ನಮಗಾಗಿ ಕೂಡಾ ನೀವು ಪ್ರಾರ್ಥಿಸಿ ಎಂದು ಎಡತ್ತರ ಜುಮಾ ಮಸೀದಿ ಅಧ್ಯಕ್ಷ ಉಸ್ಮಾನ್ ಈ ಮೂಲಕ ತಿಳಿಸಿದ್ದಾರೆ.