ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಮೊಬೈಲ್ ಟವರ್, ವಿದ್ಯುತ್ ತಂತಿಗಳ ಪ್ರಭಾವವೋ ಏನೋ ಪಕ್ಷಿಗಳ ಸಂತತಿ ನಶಿಸುತ್ತಿದೆ.ಕಳೆದ ೩೦ ವರ್ಷಗಳ ಹಿಂದೆ ಕಾಣಸಿಗುತ್ತಿದ್ದ ಪಕ್ಷಿಗಳು ಹಾಗೂ ಅಲ್ಲಿ ಇಲ್ಲಿ ಹಾರಾಡುತ್ತಿದ್ದ ಪಕ್ಷಿಗಳು ಇಂದು ಭಾರಿ ಅಪರೂಪವಾಗಿ ಬಿಟ್ಟಿದೆ.ಹೀಗಾಗಿ ಪ್ರಾಣಿ,ಪಕ್ಷಿಗಳ ಸಂಖ್ಯೆ ಹಾಗೂ ಅವುಗಳ ಸಂತತಿಯನ್ನು ಉಳಿಸುವಲ್ಲಿಯೂ ಭಾರಿ ಪ್ರಯತ್ನಗಳಾಗುತ್ತಿರುವ ಈ ಸಂದರ್ಭದಲ್ಲಿಯೇ ಇಲ್ಲೊಂದು ಅಪರೂಪದ ಪಕ್ಷಿಯ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.ಈ ಪಕ್ಷಿ ಕ್ಯಾಮರಾ ಮೂಲಕ ಗೋಚರವಾಗಿದ್ದು, ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.
ಸುಮಾರು 100 ವರ್ಷಗಳಲ್ಲಿ ಮಾಡಲು ಸಾಧ್ಯವಾಗದಿದ್ದ ಆವಿಷ್ಕಾರವನ್ನು ಮಾಡುವಲ್ಲಿ ಸಂಶೋಧಕರ ತಂಡವು ಯಶಸ್ವಿಯಾಗಿದೆ. ಅಪರೂಪದ ಅರ್ಧ ಹೆಣ್ಣು ಮತ್ತು ಅರ್ಧ ಗಂಡು ಪಕ್ಷಿಯೊಂದು ಗೋಚರವಾಗಿದ್ದು, ಭಾರಿ ಕುತೂಹಲವನ್ನುಂಟು ಮಾಡಿದೆ.ಒಟಾಗೋ ವಿವಿಯ ಪ್ರಾಣಿಶಾಸ್ತ್ರಜ್ಞ ಪ್ರೊಫೆಸರ್ ಹಮಿಶ್ ಸ್ಪೆನ್ಸರ್ ಅವರು ಕೊಲಂಬಿಯಾದಲ್ಲಿ ಅಪರೂಪದ ಪಕ್ಷಿ ಪ್ರಭೇದಗಳನ್ನು ಪತ್ತೆ ಮಾಡಿದ್ದು, ಹವ್ಯಾಸಿ ಪಕ್ಷಿಶಾಸ್ತ್ರಜ್ಞ ಜಾನ್ ಮುರಿಲ್ಲೊ ಅವರು ಎರಡು ಲಿಂಗ ಮಿಶ್ರಣದ ಹನಿಕ್ರೀಪರ್ ಅನ್ನು ಕಂಡು ವಿಸ್ಮಿತರಾಗಿದ್ದಾರೆ.
ವಿಚಿತ್ರವೆಂದರೆ ವೈಜ್ಞಾನಿಕವಾಗಿ ‘ಉಭಯಲಿಂಗ ಗುಣಲಕ್ಷಣ’ ಹಕ್ಕಿ ತನ್ನ ದೇಹದಲ್ಲಿ ಗಂಡು ಮತ್ತು ಹೆಣ್ಣು ಗುಣಲಕ್ಷಣಗಳನ್ನು ಪ್ರದರ್ಶಿಸಿದೆ. ಈ ಪಕ್ಷಿಯಲ್ಲಿ,ದೇಹದ ಒಂದು ಭಾಗವು ಗಂಡು ಪುಕ್ಕಗಳು ಮತ್ತು ಸಂತಾನೋತ್ಪತ್ತಿ ಅಂಗಗಳೊಂದಿಗೆ ಕಾಣಿಸಿಕೊಂಡಿದೆ. ಇನ್ನೊಂದು ಬದಿಯಲ್ಲಿ ಸ್ತ್ರೀ ಪುಕ್ಕಗಳು ಮತ್ತು ಸಂತಾನೋತ್ಪತ್ತಿ ಅಂಗಗಳೊಂದಿಗೆ ಕಾಣಿಸಿಕೊಂಡು ಪಕ್ಷಿ ಪ್ರಪಂಚದಲ್ಲಿ ಮತ್ತು ಜೀವ ವಿಜ್ಞಾನ ವಲಯದಲ್ಲಿ ಬೆರಗು ಮೂಡಿಸಿದೆ.
“ಅನೇಕ ಪಕ್ಷಿವೀಕ್ಷಕರಿಗೆ ಪೂರ್ಣ ಜೀವನದಲ್ಲಿ ಯಾವುದೇ ಜಾತಿಯ ಪಕ್ಷಿಗಳಲ್ಲಿ ಉಭಯಲಿಂಗ ಗುಣಲಕ್ಷಣ ಕಾಣಸಿಗುವುದಿಲ್ಲ. ಪಕ್ಷಿಗಳಲ್ಲಿ ಈ ವಿದ್ಯಮಾನ ಅತ್ಯಂತ ಅಪರೂಪದ್ದಾಗಿದ್ದು, ನ್ಯೂಜಿಲ್ಯಾಂಡ್ ನಿಂದ ಇಂತಹ ಯಾವುದೇ ಉದಾಹರಣೆಗಳ ಬಗ್ಗೆ ನನಗೆ ತಿಳಿದಿಲ್ಲ. ಇದು ಗಮನಾರ್ಹವಾಗಿದ್ದು, ಅದನ್ನು ನೋಡಲು ನನಗೆ ತುಂಬಾ ಅಚ್ಚರಿ ಎನಿಸಿತು” ಎಂದು ಹಮಿಶ್ ಸ್ಪೆನ್ಸರ್ ಹೇಳಿದ್ದಾರೆ.ಪಕ್ಷಿಯ ಕುರಿತಾಗಿ ನಡೆದ ಸಂಶೋಧನೆಗಳ ವಿವರಗಳನ್ನು ಜರ್ನಲ್ ಆಫ್ ಫೀಲ್ಡ್ ಆರ್ನಿಥಾಲಜಿಯಲ್ಲಿ ಪ್ರಕಟಿಸಲಾಗಿದ್ದು,ಇದು 100 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ನಡೆಸಿದ ಆವಿಷ್ಕಾರದಲ್ಲಿ ಗೈನಾಂಡ್ರೊಮಾರ್ಫಿಸಂನ(ಉಭಯಲಿಂಗ ಗುಣಲಕ್ಷಣ) ಜಾತಿಗಳ ದಾಖಲೆ ಸೇರಿದ ಎರಡನೇ ಉದಾಹರಣೆಯಾಗಿದೆ ಎಂದು ಹೇಳಲಾಗಿದೆ.