ನ್ಯೂಸ್ ನಾಟೌಟ್ :’ಕಾಂತಾರ’ ಕನ್ನಡ ಸಿನಿಮಾ ಇಡೀ ವಿಶ್ವದಾದ್ಯಂತ ಭಾರಿ ಸಂಚಲನವನ್ನುಂಟು ಮಾಡಿದ ಸಿನಿಮಾ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿದ ಸಿನಿಮಾದ ಮುಂದುವರಿದ ಭಾಗವಾಗಿ ‘ಕಾಂತಾರದ ಅಧ್ಯಾಯ 1’ತೆರೆ ಮೇಲೆ ಬರಲಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳು ಭಾರಿ ಕುತೂಹಲವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ನಿಮ್ಗೆಲ್ಲಾ ತಿಳಿದಿರುವಂತೆ ಕಾಂತಾರದ ಅಧ್ಯಾಯ 1 ಚಿತ್ರದ ಮುಹೂರ್ತ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ನೆರವೇರಿತ್ತು. ಈಗಾಗಲೇ ʻಕಾಂತಾರʼ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿರುವಂತೆ ಇದೀಗ ರಿಷಬ್ ಅವರು ದೈವ ದರ್ಶನವನ್ನು ಪಡೆದಿದ್ದಾರೆ.ಆಗ ರಿಷಬ್ ಶೆಟ್ಟಿಯವರಿಗೆ ದೈವ ಅಭಯ ನೀಡಿದೆ. ʻಭಯ ಪಡಬೇಡ ನಾನಿದ್ದೇನೆʼ ಎಂದು ಎನ್ನುವ ಮೂಲಕ ರಿಷಬ್ ಶೆಟ್ಟಿಯವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.
ಅತ್ತಿತ್ತ ಕಣ್ಣಾಡಿಸದೆ ದೈವವನ್ನೇ ನೋಡುತ್ತಾ ನಿಂತ ರಿಷಬ್ ಶೆಟ್ಟಿಯ ವಿಡಿಯೊ ಬಾರಿ ವೈರಲ್ ಆಗಿದೆ.ರಿಷಬ್ ಶೆಟ್ಟಿಯನ್ನು ಮೈಸಂದಾಯ ದೈವ ಆಲಂಗಿಸಿ, ಕಾಂತಾರ ರೀತಿಯಲ್ಲೇ ರಿಷಬ್ಗೆ ಆಶೀರ್ವಾದ ನೀಡಿದೆ. ದೈವದ ಅಭಯ ಪಡೆಯಲು ಮಂಗಳೂರಿಗೆ ರಿಷಬ್ ಬಂದಿದ್ದು, ಮಂಗಳೂರು ವಜ್ರದೇಹಿ ಮಠದ ದೈವ ಕೋಲಕ್ಕೆ ರಿಷಬ್ ಭೇಟಿ ಕೊಟ್ಟಿದ್ದಾರೆ. ವಜ್ರದೇಹಿ ದೇಹಿ ಮಠದ ಮೈಸಂದಾಯ ಕೋಲದಲ್ಲಿ ರಿಷಬ್ ಭಾಗಿಯಾಗಿ, ದೈವದ ಅಭಯ ಪಡೆಯಲು ಆಗಮಿಸಿದ್ದರು.
ರಿಷಬ್ ಅವರ ಇಚ್ಛೆಯಂತೆ ವಜ್ರದೇಹಿ ಶ್ರೀ ಕೋಲಕ್ಕೆ ಆಹ್ವಾನಿಸಿದ್ದು, ದೈವ ಕೂಡ ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ ಎಂದು ರಿಷಬ್ ಅವರಿಗೆ ಸೂಚನೆ ಕೊಟ್ಟಿದೆ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮಾಡಿ ಆಶೀರ್ವದಿಸಿದೆ. ಏಕಾ ಏಕಿ ದೈವ ಕೋಲದಲ್ಲಿ ರಿಷಬ್ ಭಾಗಿಯಾಗಿದ್ದು, ತೀರಾ ಎಚ್ಚರಿಕೆ ವಹಿಸಿ ಚಿತ್ರ ತೆರೆ ಮೇಲೆ ತರಲು ರಿಷಬ್ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ದೈವಾರಾಧನೆಯ ಅವಹೇಳನವಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಆಚರಣೆಗೆ ಧಕ್ಕೆಯಾಗಬಾರದು ಎಂದು ಚಿಂತಿಸುತ್ತಿದ್ದಾರೆ. ದೈವಾರಾಧನೆಯ ಕಟ್ಟುಪಾಡು ಅಧ್ಯಯನ ಮಾಡಿಕೊಂಡು, ದೈವದ ನೆಲೆಯನ್ನ ಅರಿತುಕೊಂಡು ಸಮಾಜಕ್ಕೆ ತೋರಿಸಬೇಕು ಎಂಬ ಇಚ್ಛೆಯಿಂದು ರಿಷಬ್ ಕೋಲಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ.
ರಿಷಬ್ ಅವರು ಸಿನಿಮಾ ಕುರಿತಾಗಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದು,ರಿಷಬ್ ಮಾತನಾಡಿ ʻʻಕಾಂತಾರದ ಅಧ್ಯಾಯ 1 ಸಿನಿಮಾ ಶುರು ಮಾಡಿದ್ದೇವೆ. ನಿಮ್ಮ ಆಶೀರ್ವಾದದಿಂದ ಸಕ್ಸೆಸ್ ಆಗಿದೆ. ಈ ಯಶಸ್ಸನ್ನು ಕನ್ನಡಿಗರಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಅದೇ ತರಹ ಮುಂದುವರಿದ ಪಯಣ ಇದು. ಕಾಂತಾರದ ಮುನ್ನುಡಿ, ಅಂದರೆ ಹಿಂದೆ ಏನು ನಡೆಯಿತು ಎನ್ನುವುದನ್ನ ಹೇಳಲು ಹೊರಟ್ಟಿದ್ದೇನೆ. ಕಾಂತಾರವನ್ನು ಬೆಂಬಲಿಸಿ ದೊಡ್ಡ ಯಶಸ್ಸನ್ನು ಕೊಟ್ಟಿದ್ದೀರಾ. ಆ ಯಶಸ್ಸನ್ನು ತೆಗೆದುಕೊಂಡು ಅದ್ಭುತವಾದ ಕೆಲಸ ಮಾಡುವಂತಹ ಕೆಲಸ ತಂಡ ಮಾಡುತ್ತಿದೆ. ನಮಗಂತೂ ಆನೆಗುಡ್ಡ ಎಂದರೆ ಲಕ್ಕಿ. ನಾವು ನಂಬಿದಂತಹ ದೇವರು. ಮಾತಿಗಿಂತ ಕೆಲಸ ಮುಖ್ಯ. ಸಿನಿಮಾನೇ ಮಾತನಾಡಿದರೆ ಚೆಂದ. ಈ ಭಾಗದಲ್ಲಿಯೇ ಶೂಟ್ ಮಾಡಬೇಕು ಎಂಬುದೇ ಇದೆ. ಕನ್ನಡಿಗರೇ ಪ್ರಥಮ ಆದ್ಯತೆ. ಹೊಸ ಪ್ರತಿಭೆಗಳನ್ನು ಹುಡುಕುತ್ತಾ ಇದ್ದೇವೆ, ಹೊಂಬಾಳೆ ಸಪೋರ್ಟ್, ವಿಜಯ್ ಅವರ ನಂಬಿಕೆ ಸಕ್ಸೆಸ್ಗೆ ಸಾಥ್ ಕೊಟ್ಟಿದೆ. ಕಥೆಗೆ ಏನು ಬೇಕೋ ಅವರು ಸಹಾಯ ಮಾಡುತ್ತಿದ್ದಾರೆ. ತಾಂತ್ರಿಕ ವರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಕಲಾವಿದರಲ್ಲಿ ಸ್ವಲ್ಪ ಜನ ಹೊಸಬರು ಬರುತ್ತಾರೆʼʼ ಎಂದಿದ್ದರು.
ಒಟ್ಟಿನಲ್ಲಿ ರಿಷಬ್ ಶೆಟ್ಟಿಯವರ ಮೇಲೆ ಸಿನಿ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು,ಅವರ ನಿರೀಕ್ಷೆಯನ್ನು ಹುಸಿಯಾಗದಂತೆ ಮಾಡುವ ಜವಾಬ್ದಾರಿ ಕೂಡ ರಿಷಬ್ ಶೆಟ್ಟಿಯವರ ಮೇಲಿದೆ.ಮತ್ತೊಂದೆಡೆ ಇದು ತುಳುನಾಡಿನ ನಂಬಿಕೆಯ ಪ್ರತೀಕವಾದ ದೈವರಾಧನೆ , ದೈವಕ್ಕೆ ಸಂಬಂಧ ಪಟ್ಟ ವಿಷಯವಾಗಿರುವುದರಿಂದಲೂ ಈ ಚಿತ್ರವನ್ನು ಬಹಳ ನಾಜೂಕಿನಿಂದ , ನಂಬಿಕೆಗೆ ಚ್ಯುತಿ ಬರದ ರೀತಿಯಲ್ಲಿ ಚಿತ್ರೀಕರಿಸಲಾಗುತ್ತಿದೆ.