ನ್ಯೂಸ್ ನಾಟೌಟ್ :ಯಲಹಂಕ ನ್ಯೂ ಟೌನ್ನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮ ಆಯೋಜಿಸಲಾಗಿತ್ತು. ಮನವಿ ಸಲ್ಲಿಸಲು ಬಂದಂತಹ ಸಾರ್ವಜನಿಕರ ಅಹವಾಲುಗಳನ್ನು ಕೂಲಂಕುಷವಾಗಿ ಆಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ದೃಷ್ಟಿಯಿಲ್ಲದ ಯುವತಿಗೆ ಕೆಲಸ, ಬಿಡಿಎ ನಿವೇಶನ (ಫ್ಲಾಟ್), ಬಡವರ ಜಾಗ ರಕ್ಷಣೆಗೆ ಅಧಿಕಾರಿಗಳಿಗೆ ತಾಕೀತು, ದಾಖಲೆಗಳು ಸರಿ ಇದ್ದರೂ ಖಾತೆ ಮಾಡಿಕೊಡದ ಅಧಿಕಾರಿಗಳ ತರಾಟೆ, ದಯಾಮರಣ ಕೋರಿ ಬಂದವರಿಗೆ ಸಾಂತ್ವನ, ಆರ್ಥಿಕ ನೆರವು… ಹೀಗೆ ಸಂಕಷ್ಟಗಳನ್ನು ಹೊತ್ತು ತಂದ ಜನರಿಗೆ ಪರಿಹಾರ ನೀಡುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನರ ಮನಗೆದ್ದಿದ್ದು ʼಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರʼ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂತು.
ಡಿಕೆಶಿ ತಾಕೀತು ಮತ್ತು ಸಾಂತ್ವನದ ಮಾತುಗಳು ಕಂಗಾಲಾಗಿ ಬಂದವರ ಮುಖದಲ್ಲಿ ಭರವಸೆಯ ಬೆಳಕು ಮೂಡಿಸಿತು.ಈ ವೇಳೆ ಸಮಾಧಾನ ಪಡಿಸಿದ ಅವರು “ನಿನ್ನ ಭೂಮಿಯನ್ನು ಯಾರಿಗೂ ಕೊಡಬೇಡ.., ಜಾಗ ಉಳಿಸಿಕೋ…, ಅಳಬೇಡಮ್ಮ ನಮ್ಮ ಸರ್ಕಾರವಿದೆ, ನಾನಿದ್ದೇನೆ, ನಿನ್ನ ಜಾಗದಲ್ಲೇ ಇರು, ಅದನ್ನು ಬಿಡಬೇಡ, ಎಂಜಿನಿಯರ್ ಒಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಯಬೇಕು ಎಂದು ತಾಕೀತು ಮಾಡಿದರು.
ಸುಮಾರು 3 ಸಾವಿರ ಮನವಿಗಳನ್ನು ಸ್ವೀಕರಿಸಿದ ಅವರು, ಸ್ಥಳದಲ್ಲೇ ಇದ್ದಂತಹ ಕಂದಾಯ ಅಧಿಕಾರಿಗಳಿಗೆ “ಏನ್ರೀ ಇದು, ಈ ಭಾಗದಲ್ಲಿ ಇಷ್ಟೊಂದು ಭೂಮಿಯ ಸಮಸ್ಯೆ ಇದೆ. ಎಲ್ಲಾ ದಾಖಲೆಗಳು ಸರಿ ಇದ್ದರೂ ಖಾತೆ ಮಾಡಿಕೊಡಲು ಏನಾಗಿದೆ ನಿಮಗೆ” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ದೃಷ್ಟಿ ದೋಷವುಳ್ಳ ಯುವತಿಗೆ ಬಿಡಿಎ ಫ್ಲ್ಯಾಟ್ , ಬಿಬಿಎಂಪಿ ಕೆಲಸದ ಭರವಸೆ ನೀಡಿದ್ದಾರೆ.ದೃಷ್ಟಿದೋಷವಿದ್ದರೂ ಬಿ.ಎ ಪದವಿ ಪೂರ್ಣ ಮಾಡಿದ್ದೇನೆ. ಮನೆ ಮತ್ತು ಕೆಲಸ ಬೇಕು ಎಂದು ದಿವ್ಯಾಂಜಲಿ ಮನವಿ ಸಲ್ಲಿಸಿದಾಗ, ಬಿಡಿಎ ಆಯುಕ್ತ ಜಯರಾಮ್ ಅವ್ರಿಗೆ “ವಿಶೇಷಚೇತನರ ಕೋಟಾದ ಅಡಿಯಲ್ಲಿ ಫ್ಲಾಟ್ ವ್ಯವಸ್ಥೆ ಮಾಡಿ” ಎಂದರು. ಅದೇ ರೀತಿ ಯುವತಿಗೆ ಪಾಲಿಕೆಯಲ್ಲಿ ಕೆಲಸ ಕೊಡುವಂತೆ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದರು. ಇಂತಹ ಅನೇಕ ಭಾವುಕ ಕ್ಷಣಗಳಿಗೆ ಯಲಹಂಕದಲ್ಲಿ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮ ಸಾಕ್ಷಿಯಾಯಿತು.