ನ್ಯೂಸ್ ನಾಟೌಟ್ :ಭೂಮಿಯಲ್ಲಿರುವ ಪ್ರತಿಯೊಂದು ಜೀವಿಗಳಿಗೂ ಹಸಿವು ಅನ್ನೋದು ಒಂದೇ ರೀತಿ.ಹಸಿವನ್ನು ಸಹಿಸಿಕೊಳ್ಳುವ ಶಕ್ತಿ ಯಾರಿಗೂ ಇಲ್ಲ.ಆದರೆ ಭೂಮಿಗೆ ಬಂದ ಪ್ರತಿಯೊಂದು ಜೀವಿಗಳೂ ಕೂಡ ಹೊಟ್ಟೆಯ ಹಸಿವಿನ ದಾಹವನ್ನು ತಣಿಸಲು ಆಹಾರವನ್ನು ಹುಡುಕಲೇ ಬೇಕು.ಹೀಗೆ ಹಸಿವಿನಿಂದ ಬಳಲಿದ್ದ ನಾಯಿಯೊಂದು ಆಹಾರವನ್ನು ಹುಡುಕಿಕೊಂಡು ಹೊರಟಿದೆ.ಈ ವೇಳೆ ಪೊಟ್ಟಣವೊಂದು ಸಿಕ್ಕಿದೆ.ಹೊಟ್ಟೆ ತುಂಬಾ ತಿಂದು ಬಿಡ್ತೀನಿ ಅನ್ನುವಷ್ಟರೊಳಗೆ ಪೊಟ್ಟಣದೊಳಗಿದ್ದ ಸಿಡಿಮದ್ದು ಸಿಡಿದು ನಾಯಿಯೊಂದು ಉಸಿರು ಚೆಲ್ಲಿದ ಘಟನೆ ತುಮಕೂರಿನಲ್ಲಿ ಸಂಭವಿಸಿದೆ.
ಶಿರಾ ತಾಲೂಕಿನ ಬುಕ್ಕಾ ಪಟ್ಟಣ ಹೋಬಳಿ ಮಾದೇನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದ ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.ಶಾಲೆ ವಿದ್ಯಾರ್ಥಿಗಳು ಆಟವಾಡುವ ಸಮಯದಲ್ಲಿ ಮೈದಾನದಲ್ಲಿ (School ground) ಒಂದು ಪೊಟ್ಟಣ ಸಿಕ್ಕಿತ್ತು. ಅದನ್ನು ಒಬ್ಬ ಬಾಲಕ ತೆಗೆದುಕೊಂಡು ಹೋಗಿ ತಂದೆಯ ಬಳಿ ತೋರಿಸಿದ್ದ. ಇದು ಯಾರೋ ವಾಮಾಚಾರ ಮಾಡಿ ಎಸೆದಿರುವ ಪೊಟ್ಟಣ ಎಂದು ತಿಳಿದ ತಂದೆ ಅದನ್ನು ಮೈದಾನದಲ್ಲೇ ಬಿಟ್ಟಿದ್ದರು.
ಈ ನಡುವೆ ಒಂದು ಬೀದಿ ನಾಯಿ ಅದನ್ನು ಕಚ್ಚಿದೆ. ಕಚ್ಚುತ್ತಿದ್ದಂತೆಯೇ ಅದು ಸಿಡಿದಿದ್ದು ನಾಯಿಯ ಬಾಯಿಯೆಲ್ಲಾ ಸೀಳಿ ಹೋಗಿದೆ. ನಾಯಿ ಸ್ಥಳದಲ್ಲೇ ದುರಂತ ಅಂತ್ಯ ಕಂಡಿದೆ. ಯಾರೋ ದುಷ್ಕರ್ಮಿಗಳು ಮಾಡಿದ ತಪ್ಪಿಗೆ ಅನ್ಯಾಯವಾಗಿ ನಾಯಿ ಬಾರದ ಲೋಕಕ್ಕೆ ತೆರಳಿದೆ. ಅಂದಹಾಗೆ ಪೊಟ್ಟಣದಲ್ಲಿ ಸಿಡಿಮದ್ದು ತುಂಬಿ ಇಟ್ಟಿದ್ದು ಸ್ಪಷ್ಟವಾಗಿದೆ. ಆದರೆ, ಅವರ ಉದ್ದೇಶ ಏನಾಗಿತ್ತು? ಏನಾದರೂ ದುಷ್ಕರ್ಮಿ ಕೃತ್ಯ ನಡೆಸಲು ಈ ರೀತಿ ಮಾಡಿದರೇ? ಅವರ ಟಾರ್ಗೆಟ್ ಯಾರಾಗಿದ್ದರು ಎನ್ನುವುದು ಸ್ಪಷ್ಟವಿಲ್ಲ.ಶಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.ಈ ಪ್ರದೇಶದಲ್ಲಿ ಇನ್ನಷ್ಟು ಕಡೆಗಳಲ್ಲಿ ಈ ರೀತಿ ಸ್ಫೋಟಕ ಇಟ್ಟಿರುವ ಸಾಧ್ಯತೆ ಇದ್ದು,ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ.