ನ್ಯೂಸ್ ನಾಟೌಟ್ :ಮೊಬೈಲ್ ಫೋನ್ ಎಷ್ಟರ ಮಟ್ಟಿಗೆ ಸಹಾಯಕ್ಕೆ ಬರುತ್ತೋ , ಅಷ್ಟೇ ಅಪಾಯಗಳನ್ನು ತಂದೊಡುತ್ತೆ ಅನ್ನೋದರ ಬಗ್ಗೆ ಹಲವು ವರದಿಗಳ ಮೂಲಕ ತಿಳಿದು ಕೊಂಡಿದ್ದೇವೆ.ಆದರೆ ಇದೊಂದು ಅದಕ್ಕೆ ತದ್ವಿರುದ್ಧವಾದ ವರದಿಯಾಗಿದ್ದು,ಮೊಬೈಲ್ ನಿಂದ ದೂರವಿರು ಎಂದು ಹೇಳಬೇಕಾದ ತಾಯಿಯೇ ಮೊಬೈಲ್ಗಾಗಿ ತನ್ನ ಜೀವನವನ್ನೇ ಕತ್ತಲನ್ನಾಗಿಸಿದ ಘಟನೆ ವರದಿಯಾಗಿದೆ.
ಮಹಿಳೆಯೊಬ್ಬಳು ತನ್ನ 8 ವರ್ಷದ ಮಗಳು ಆಟವಾಡಲು ಮೊಬೈಲ್ ಫೋನ್ ಕೇಳಿದ್ದಕ್ಕೆ ಕುಪಿತಗೊಂಡು ಆಕೆಗೆ ಫೋನ್ ಕೊಡಲು ನಿರಾಕರಿಸಿದ್ದು, ತದನಂತರ ಪುತ್ರಿಗೆ ಮನಬಂದಂತೆ ಥಳಿಸಿ ಬಾರದ ಲೋಕಕ್ಕೆ ತೆರಳಿದ್ದಾಳೆ.ಈ ಘಟನೆ ಓಲ್ಡ್ ಫರಿದಾಬಾದ್ನ ಬಸೆಲ್ವಾ ಕಾಲೋನಿಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.ಮಹಿಳೆಯನ್ನು ರಾಧಾ ಎಂದು ಗುರುತಿಸಲಾಗಿದ್ದು, ಪತಿಯಿಂದ ಬೇರ್ಪಟ್ಟು ಕಳೆದ ಎಂಟು ವರ್ಷಗಳಿಂದ ಪೋಷಕರೊಂದಿಗೆ ವಾಸವಾಗಿದ್ದರು ಎನ್ನಲಾಗಿದೆ.
ಘಟನೆಯ ಸಮಯದಲ್ಲಿ ರಾಧಾ ಅವರ ತಂದೆ ಮೂಲಚಂದ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದ್ದು, ಈ ವೇಳೆ ಅವರ ಪತ್ನಿ ಸುಶೀಲಾ ಅವರಿಂದ ಫೋನ್ ಕರೆ ಬಂದಿದೆ. ಕೂಡಲೇ ಮನೆಗೆ ತಲುಪುವಂತೆ ಹೇಳಿದ್ದಾರೆ. ಮೂಲಚಂದ್ ಮನೆಗೆ ಬಂದಾಗ ರಾಧಾಳ ಕೋಣೆ ಒಳಗಿನಿಂದ ಬೀಗ ಹಾಕಿರುವುದು ಕಂಡುಬಂದಿದೆ. “ನಾನು ಹಲವಾರು ಬಾರಿ ಬಾಗಿಲು ಬಡಿದರೂ ರಾಧಾ ಬಾಗಿಲು ತೆರೆಯಲಿಲ್ಲ. ಕಡೆಗೆ ನಾವು ಬಾಗಿಲು ಒಡೆದು ನೋಡಿದಾಗ ರಾಧಾ ಉಸಿರು ಚೆಲ್ಲಿದ್ದಳು ಎಂದು ಮೂಲಚಂದ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.
ಮೂಲಚಂದ್ ಅವರ ಪತ್ನಿ ಸುಶೀಲಾ ಪ್ರಕಾರ, “ರಾಧಾ ತನ್ನ ಮೊಬೈಲ್ ಫೋನ್ನಲ್ಲಿ ಯಾವುದೋ ಆಟ ಆಡುತ್ತಿದ್ದಳು. ಆಗ ಅವಳ 8 ವರ್ಷದ ಮಗಳು ಶಿವಾನಿ ತನ್ನನ್ನು ಆಡಲು ಬಿಡುವಂತೆ ಒತ್ತಾಯಿಸಿದಳು. ಇದಕ್ಕೆ ಕುಪಿತಗೊಂಡ ರಾಧಾ ತನ್ನ ಮೊಬೈಲ್ ಅನ್ನು ಚೂರು ಮಾಡಿದಳು ಮತ್ತು ಮಗಳಿಗೆ ಹೊಡೆಯುತ್ತಾ ಕೋಣೆಯಿಂದ ಹೊರಬಂದಳು. ಇದಾದ ಬಳಿಕ ತನ್ನ ರೂಮ್ ಬಾಗಿಲು ಮುಚ್ಚಿ ಈ ಕೃತ್ಯವೆಸಗಿದ್ದಾಳೆ” ಎಂದು ಹೇಳಿದ್ದಾರೆ.