ನ್ಯೂಸ್ ನಾಟೌಟ್: ಸುಳ್ಯದ ರಥಬೀದಿಯಲ್ಲಿರುವ ಆಟೋ ನಿಲ್ದಾಣದ ಬಳಿ ವಿದ್ಯುತ್ ಕಂಬವೊಂದು ಸಾರ್ವಜನಿಕರಿಗೆ ವಿದ್ಯುತ್ ಶಾಕ್ ಕೊಡೊ ಬಗ್ಗೆ ನ್ಯೂಸ್ ನಾಟೌಟ್ ಪ್ರಕಟಿಸಿದ್ದ ವಿಡಿಯೋ ವರದಿಗೆ ಮೆಸ್ಕಾಂ ತುರ್ತಾಗಿ ಸ್ಪಂದಿಸಿದೆ.
‘ಸುಳ್ಯದ ಜನರಿಗೆ ಶಾಕ್ ಟ್ರೀಟ್ಮೆಂಟ್ ಕೊಡೊ ವಿದ್ಯುತ್ ಕಂಬ..! ರಥಬೀದಿಯಲ್ಲಿ ಸಂಚರಿಸೊ ಜನ್ರೆ ಹುಷಾರ್..!’ ಎಂಬ ಶೀರ್ಷಿಕೆಯಡಿ ವಿಡಿಯೋ ವರದಿ ಪ್ರಕಟಿಸಲಾಗಿತ್ತು. ಈ ವರದಿ ‘ನ್ಯೂಸ್ ನಾಟೌಟ್’ ಫೇಸ್ ಬುಕ್ ಪುಟದಲ್ಲಿ ಪ್ರಕಟವಾಗುತ್ತಿದ್ದಂತೆ ಮಂಗಳೂರಿನಿಂದ ಮೆಸ್ಕಾಂ ತುರ್ತು ಪ್ರತಿಕ್ರಿಯೆಯನ್ನು ನೀಡಿದೆ. ಅಗತ್ಯ ಕೆಲವೊಂದು ಮಾಹಿತಿಗಳನ್ನು ಕೇಳಿದ್ದು ಅದನ್ನು ಕಳಿಸಿಕೊಡಲಾಗಿದೆ.
ಶೀಘ್ರದಲ್ಲಿಯೇ ಇದಕ್ಕೊಂದು ಶಾಶ್ವತ ಪರಿಹಾರ ಸಿಗುವ ಭರವಸೆ ಸಿಕ್ಕಿದೆ. ಗುರುವಾರ ಈ ಭಾಗದಲ್ಲಿ ಆಟೋ ಚಾಲಕರೊಬ್ಬರಿಗೆ ವಿದ್ಯುತ್ ಶಾಕ್ ತಗುಲಿತ್ತು. ಮಳೆ ಇದ್ದಸಂದರ್ಭದಲ್ಲಿ ನಡೆದುಕೊಂಡು ಹೋದರೂ ಶಾಕ್ ತಾಗುತ್ತಿದೆ ಎಂದು ಸ್ಥಳೀಯರು ನ್ಯೂಸ್ ನಾಟೌಟ್ ಜೊತೆಗೆ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದರು. ಹಲವು ಸಲ ಇದನ್ನು ಸರಿಪಡಿಸುವಂತೆ ಸುಳ್ಯದ ಅಧಿಕಾರಿಗಳನ್ನು ಕೇಳಲಾಗಿತ್ತು.
ಆದರೆ ಸರಿ ಆಗಿರಲಿಲ್ಲ. ಈ ಬೆನ್ನಲ್ಲೇ ನಡೆದುಕೊಂಡು ಹೋಗುತ್ತಿದ್ದ ಹಲವರಿಗೆ ವಿದ್ಯುತ್ ಪ್ರವಹಿಸಿದ ಅನುಭವ ಆಗಿತ್ತು. ಮುಂದೆ ಯಾರದ್ದಾದರೂ ಅಮಾಯಕರ ಜೀವ ಬಲಿಯಾಗೋದು ಬೇಡ ಅನ್ನುವ ಕಾರಣದಿಂದ ಇದರ ವಿಡಿಯೋವನ್ನು ಮಾಡಿ ಸ್ಥಳೀಯರೊಬ್ಬರು ನ್ಯೂಸ್ ನಾಟೌಟ್ ಗೆ ಕಳಿಸಿಕೊಟ್ಟಿದ್ದರು.