ನ್ಯೂಸ್ ನಾಟೌಟ್ : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿಯಲ್ಲಿ ಮಳೆ (Coastal Karnataka Rains) ಸುರಿಯುತ್ತಿದೆ.ಕೊಡಗು , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳಲಿದೆ.ಹೀಗಾಗಿ ಇಡೀ ದಿನ ಮೋಡ ಕವಿದ ವಾತಾವರಣವುದ್ದು ಲಘುವಾಗಿ ಮಳೆ ಸುರಿದಿದೆ.
ಮುಂಜಾನೆಯಿಂದಲೂ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಂತುರು ಮಳೆಯಾಗಿದೆ.ಸಮುದ್ರ ಮಟ್ಟದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಆಗ್ನೇಯ ಅರಬ್ಬೀ ಸಮುದ್ರದ ಸಮುದ್ರ ಮಟ್ಟದಿಂದ 5.8 ಕಿ.ಮೀ ಎತ್ತರದಲ್ಲಿ ಸುಳಿಗಾಳಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ.
ಕೃಷಿಕರಿಗೆ ಸಂಕಷ್ಟ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಬಾರಿ ಸಂಕಟಕ್ಕೆ ತಳ್ಳುವಂತೆ ಮಾಡಿದೆ. ಮೊದಲೇ ಬೆಳೆ ಹಾನಿಯಿಂದಾಗಿ ಕಂಗಾಲಾಗಿದ್ದ ರೈತರು ಈ ಮಳೆಯಿಂದಾಗಿ ಮತ್ತಷ್ಟು ಭೀತಿಗೊಳಗಾಗಿದ್ದಾರೆ.ಅದರಲ್ಲೂ ಗ್ರಾಮೀಣ ಭಾಗದ ಕೃಷಿಕರ ಕೊಯಿಲಿನ ಅಡಿಕೆ ಅಂಗಳದಲ್ಲೇ ಇದ್ದು, ಅಡಿಕೆ ಮಳೆಗೆ ಒದ್ದೆಯಾಗಿದೆ. ಇದರಿಂದ ಅಡಿಕೆಯ ಗುಣಮಟ್ಟವೂ ಹಾಳಾಗಲಿದೆ.
ಮತ್ತೊಂದೆಡೆ ಅಡಿಕೆ ಮರದಲ್ಲಿ ಹಿಂಗಾರವೂ ಬೆಳವಣಿಗೆ ಹಂತದಲ್ಲಿರುವುದರಿಂದ ಅಕಾಲಿಕ ಮಳೆ ಹಿಂಗಾರದ ಬೆಳವಣಿಗೆಗೂ ಕುತ್ತು ತಂದಿದೆ. ಇನ್ನುಳಿದಂತೆ ಕಾಳುಮೆಣಸು ಬಳ್ಳಿಗೂ ಈ ಮಳೆ ಶುಭವಲ್ಲ ಅನ್ನೋದು ಕೃಷಿಕರ ಮಾತಾಗಿದೆ. ಗುರುವಾರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಹವಾಮಾನ ಇಲಾಖೆಯ ಸೂಚನೆಯ ಪ್ರಕಾರ ಕರಾವಳಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.