ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ಶಬ್ನಂ ಎಂಬ ಮುಸ್ಲಿಂ ಯುವತಿಯೊಬ್ಬಳು ಬರೋಬ್ಬರಿ ೧೫೦೦ ಕಿಮೀ ದೂರ ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ತೆರಳಿರುವ ಬಗ್ಗೆ ವರದಿಯಾಗಿತ್ತು.ಇದೀಗ ಕಾಂಗ್ರೆಸ್ ಶಾಸಕರೊಬ್ಬರು ರಾಮೋತ್ಸವದ ಜಪ (Ramotsava Jap by Muslim Congress MLA) ಮಾಡಿದ್ದಾರೆ. ಅದರಲ್ಲೂ ಮುಸ್ಲಿಂ ಶಾಸಕ ಈ ಹೇಳಿಕೆ ನೀಡಿದ್ದು ಭಾರಿ ಅಚ್ಚರಿಗೆ ಕಾರಣವಾಗಿದೆ.
ಹೌದು, ರಾಮನಗರ ಶಾಸಕ ಇಕ್ಬಾಲ್ ಹುಸೇನ್ (Ramanagar MLA Iqbal hussain) ಈ ಮಾತುಗಳನ್ನಾಡಿದ್ದಾರೆ. ʻʻನಾನೂ ಕೂಡಾ ರಾಮಭಕ್ತ, ನಾನು ರಾಮನನ್ನು ಪೂಜೆ ಮಾಡ್ತೀನಿ, ರಾಮನಗರದಲ್ಲಿ ರಾಮೋತ್ಸವವನ್ನ ನಡೆಸಬೇಕು ಎಂದು ಚಿಂತನೆ ಮಾಡಿದ್ದೇವೆ. ಅದನ್ನು ಭಕ್ತಿಪೂರ್ವಕವಾಗಿ ಮಾಡಿಯೇ ಮಾಡುತ್ತೇವೆʼʼ ಎಂದು ಹೇಳಿದ್ದಾರೆ.
ʻನಾನೂ ರಾಮನ ಭಕ್ತ, ನಾನು ಎಲ್ಲಾ ದೇವರನ್ನು ಪೂಜಿಸ್ತೇನೆ. ನಾನು ಚಿಕ್ಕವಯಸ್ಸಿನಿಂದಲೇ ಎಲ್ಲಾ ದೇವರ ಪೂಜೆ ಮಾಡಿದ್ದೇನೆ. ಹಾಗೆಯೇ ರಾಮನ ಪೂಜೆಯನ್ನೂ ಮಾಡ್ತೇನೆʼʼ ಎಂದಿರುವ ಅವರು, ರಾಮ ಮಂದಿರ ವಿಚಾರವನ್ನು ಯಾರೋ ರಾಜಕೀಯವಾಗಿ ಬಳಸಿಕೊಳ್ಳಬಹುದು. ಆದರೆ ನಾವು ಇದನ್ನ ರಾಜಕೀಯವಾಗಿ ಬಳಸಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ರಾಮನನ್ನು ಮನೆ ದೇವರು ಅಂತ ಪೂಜೆ ಮಾಡ್ತೀವಿ. ರಾಮನ ಪೂಜೆ ನಮಗೆ ಹೊಸದೇನಲ್ಲ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.ರಾಮ ನಗರ ಶಾಸಕ ಇಕ್ಬಾಲ್ ಹುಸೇನ್ ಅವರು ತಮ್ಮ ಭಾಗದಲ್ಲಿ ಎಲ್ಲ ಧರ್ಮದವರ ಜತೆ ಉತ್ತಮ ಸಂಬಂಧವನ್ನು ಹೊಂದಿದ್ದು,ರಾಷ್ಟ್ರ ಭಕ್ತಿಯ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ. ದೇವಸ್ಥಾನಗಳಿಗೆ ಭೇಟಿ ನೀಡುವುದು ಸೇರಿದಂತೆ ಪೂಜೆಗಳಿಗೆ ಭಾಗಿಯಾಗುವುದು ಅವರ ನಿತ್ಯ ಕಾಯಕ.ಸ್ವಾತಂತ್ರ್ಯ ದಿನಾಚರಣೆಯಂದು ರಾಮ ನಗರ ಜಿಲ್ಲೆಯ ಪ್ರತಿಯೊಂದು ಶಾಲೆಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ಲಡ್ಡು ವಿತರಣೆ ಮಾಡುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂ.ವನ್ನು ಕೂಡ ವೆಚ್ಚ ಮಾಡುತ್ತಾರೆ.