ನ್ಯೂಸ್ ನಾಟೌಟ್: ರಾಜ್ಯ ಸರ್ಕಾರಿ ಸ್ವಾಮ್ಯದ ಪ್ರೀಮಿಯಂ ಮದ್ಯದಂಗಡಿ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಖಾಸಗಿ ಮಳಿಗೆಗಳಿಗೆ ಸಡ್ಡು ಹೊಡೆಯುವಂತಿದೆ.
ಕರ್ನಾಟಕ ಸರ್ಕಾರವು ಮೊದಲ ಬಾರಿಗೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಖಾಸಗಿ ಮಳಿಗೆಗಳಿಗೆ ಸಮಾನವಾಗಿ ಅತ್ಯಾಧುನಿಕ ಪ್ರೀಮಿಯಂ ಮದ್ಯದ ಅಂಗಡಿಯನ್ನು ತೆರೆದಿದೆ.
ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ. (MSIL) ಇಲ್ಲಿನ ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿ ಹೊಸದಾಗಿ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆಯನ್ನು ಆರಂಭಿಸಿದ್ದು, ಈ ಮಳಿಗೆಯನ್ನು ನೂತನ ವರ್ಷಾರಂಭದ ದಿನವಾದ ಸೋಮವಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಉದ್ಘಾಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮನೋಜ್ ಕುಮಾರ್ ಅವರು, `ಮಧ್ಯಮ ವರ್ಗದಿಂದ ಹಿಡಿದು ಸಮಾಜದ ಪ್ರತಿಯೊಂದು ವರ್ಗದ ಗ್ರಾಹಕರನ್ನೂ ಸೆಳೆಯುವುದು ಎಂಎಸ್ಐಎಲ್ ನ ಗುರಿಯಾಗಿದೆ. ಇದರಂತೆ, ಹೊಸ ರೂಪ ಪಡೆದಿರುವ ಈ ಮಳಿಗೆಯಲ್ಲಿ ಸಾಮಾನ್ಯ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ಬ್ರಾಂಡೆಡ್ ಮದ್ಯದ ಉತ್ಪನ್ನಗಳು ಸುಲಭವಾಗಿ ಸಿಗಲಿವೆ ಎಂದಿದ್ದಾರೆ.
ಚಿತ್ತಾಕರ್ಷಕ ಒಳಾಂಗಣ ವಿನ್ಯಾಸ ಮತ್ತು ಗ್ರಾಹಕರಿಗೆ ಹಿತಕರ ಅನುಭವ ಸಿಗುವಂತೆ ಮಾಡಲು ಇಲ್ಲಿ ಆದ್ಯತೆ ಕೊಡಲಾಗಿದ್ದು, ಜಾಗತಿಕ ಗುಣಮಟ್ಟದ ಮಾಲ್ ರೀತಿಯಲ್ಲಿ ಈ ಪ್ರೀಮಿಯಂ ಬೋಟಿಕ್ ಇದೆ. ಎಂಎಸ್ಐಎಲ್ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಲಹೆ ಮೇರೆಗೆ ಹಾಲಿ ಇರುವ ಮದ್ಯ ಮಾರಾಟ ಮಳಿಗೆಗಳನ್ನು ಹೈಟೆಕ್ ರೀತಿಯಲ್ಲಿ ವಿನ್ಯಾಸ ಮಾಡಲು ಆರಂಭಿಸಿದ್ದು, ಹಂತಹಂತವಾಗಿ ಎಲ್ಲವನ್ನೂ ಬದಲಿಸಲಾಗುವುದು ಎಂದಿದ್ದಾರೆ.
ಡಿಸೆಂಬರ್ನಲ್ಲಿ 3000 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಯು ಡಿಸೆಂಬರ್ 2023 ರಲ್ಲಿ 3,000 ಕೋಟಿ ರೂಪಾಯಿಗಳ ಮದ್ಯ ಮಾರಾಟವನ್ನು ನೋಂದಾಯಿಸಿದೆ, ಇದು ಕಳೆದ ವರ್ಷದ ಇದೇ ತಿಂಗಳಿಗಿಂತ 400 ಕೋಟಿ ರೂಪಾಯಿ ಹೆಚ್ಚು. ರಾಜ್ಯದಲ್ಲಿ ಸರಾಸರಿ ಮಾಸಿಕ ಮದ್ಯ ಮಾರಾಟ 2,500 ಕೋಟಿ ರೂ. ಆಗಿದೆ ಎಂದು ಮಾಹಿತಿ ನೀಡಿದ್ದಾರೆ.