ನ್ಯೂಸ್ ನಾಟೌಟ್: ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ದಕ್ಷಿಣ ಕೊರಿಯಾದ (South Korea) ವಿರೋಧ ಪಕ್ಷದ ನಾಯಕ ಲೀ ಜೇ-ಮ್ಯುಂಗ್ (59) ಎಂಬವರ ಕುತ್ತಿಗೆಗೆ ಚಾಕು ಇರಿದಿರುವ ಘಟನೆ ನಡೆದಿದೆ.
ಹೊಸ ವಿಮಾನ ನಿಲ್ದಾಣದ ಸ್ಥಳಕ್ಕೆ ಭೇಟಿ ನೀಡಿದ ನಂತರ ಪತ್ರಕರ್ತರ ಗುಂಪಿನಲ್ಲಿ ಲೀ ನಡೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ವ್ಯಕ್ತಿಯೊಬ್ಬ ಕುತ್ತಿಗೆಗೆ ಇರಿದಿದ್ದಾನೆ ಎಂದು ದಕ್ಷಿಣ ಕೊರಿಯಾ ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜನರು ವಿಪಕ್ಷ ನಾಯಕರ ಸಹಾಯಕ್ಕೆ ಧಾವಿಸುತ್ತಿದ್ದಂತೆ ನೆಲಕ್ಕೆ ಕುಸಿದು ಬೀಳುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಹಲ್ಲೆಗೊಳಗಾಗಿ ಕುಸಿದು ಬಿದ್ದ ವಿಪಕ್ಷ ನಾಯಕನ ಕುತ್ತಿಗೆಯ ಮೇಲೆ ಕರವಸ್ತ್ರ ಒತ್ತಿ ರಕ್ತ ಸೋರುವುದಕ್ಕೆ ತಡೆಗಟ್ಟಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ತಕ್ಷಣ ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರನ್ನು ಪುಸಾನ್ ನ್ಯಾಷನಲ್ ಯೂನಿವರ್ಸಿಟಿ ಆಸ್ಪತ್ರೆಗೆ ಸಾಗಿಸಿದಾಗ ಪ್ರಜ್ಞೆ ಬಂದಿದೆ ಎನ್ನಲಾಗಿದೆ. ಪೊಲೀಸ್ ಅಧಿಕಾರಿಗಳು ದಾಳಿ ಕೋರನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.