ನ್ಯೂಸ್ ನಾಟೌಟ್: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಮಗೆ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ದೊಡ್ಡ ಷಡ್ಯಂತ್ರ ನಡೆಯುತ್ತಿರುವುದಾಗಿ ಸೋಮವಾರ(ಜ.೧) ಹೇಳಿಕೆ ನೀಡಿದ್ದಾರೆ.
ಪ್ರಕರಣದ ತನಿಖೆಗೆ ನೀಡಿದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದ ನಂತರವೂ ನೋಟಿಸ್ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನನ್ನ ಮೇಲೆ ದೌ*ರ್ಜನ್ಯ ನಡೆಸಿ ಹಾಗೂ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂತ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ದೊಡ್ಡ ದೊಡ್ಡವರಿದ್ದಾರೆ, ದೊಡ್ಡ ಪಿತೂರಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಈಗಾಗಲೇ ಕೇಸ್ ವಿತ್ಡ್ರಾ ಮಾಡಿದೆ. ಆದರೂ ಯಾವ ಲೆಕ್ಕಾಚಾರದಲ್ಲಿ ಕೊಟ್ಟಿದ್ದಾರೆ ಗೊತ್ತಿಲ್ಲ. ನನಗೆ ನೊಟೀಸ್ ಬಂದಿಲ್ಲ, ನನ್ನ ಸಂಸ್ಥೆಗೆ ಬಂದಿದೆ. ಹೆಂಡತಿ, ಮಕ್ಕಳ ವಿಚಾರಕ್ಕೆಲ್ಲಾ ಬಂದಿದೆ. ಆಮೇಲೆ ವೈಯಕ್ತಿಕವಾಗಿ ನನ್ನ ಬಳಿ ಬರುತ್ತಾರೆ. ಅವರಿಗೆ ಒಳಗೆ ಹಾಕುವ ಆಸಕ್ತಿ ಇದ್ದರೆ ಹಾಕಿಕೊಳ್ಳಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಯಾವುದಕ್ಕೂ ಹೆದರಲ್ಲ. ಸರ್ಕಾರ ಇದನ್ನ ಈಗಾಗಲೇ ಲೋಕಾಯುಕ್ತಕ್ಕೆ ಕೊಟ್ಟಿದೆ. ಮುಂದಿನ ಪ್ರೊಸೀಜರ್ ಲೋಕಾಯುಕ್ತ ನೋಡಿಕೊಳ್ಳುತ್ತದೆ. ತನಿಖೆ ನಡೆಸುತ್ತೆ ಎಂದಿದ್ದಾರೆ.