ನ್ಯೂಸ್ ನಾಟೌಟ್: ಸುಳ್ಯದಲ್ಲಿ ಸರ್ಕಾರಿ ಸ್ಥಳೀಯ ಬಸ್ ಗಳು ದಿಢೀರ್ ಸಂಚಾರ ನಿಲ್ಲಿಸಿದೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಚಾಲಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪರಿಣಾಮ ಸುಳ್ಯ ತಾಲೂಕಿನ ವಿವಿಧ ಕಡೆ ಸಂಚರಿಸುವ ಜನರು ಪರದಾಡುವಂತಾಗಿದೆ.
ಗುತ್ತಿಗೆ ಆಧಾರದಲ್ಲಿ ಗ್ರಾಮೀಣ ಭಾಗದಲ್ಲಿ ಓಡಾಡುವ ಬಸ್ ಗಳಿಗೆ ಕೆಎಸ್ಆರ್ ಟಿಸಿ ಹಲವಾರು ಚಾಲಕರನ್ನು ನೇಮಿಸಿತ್ತು. ಇದರ ನೇಮಕಾತಿ ಮಾಡುವ ಜವಾಬ್ದಾರಿಯನ್ನು ಮೈಸೂರಿನ ಪನ್ನಗ ಎಂಬ ಸಂಸ್ಥೆಗೆ ನೀಡಲಾಗಿತ್ತು. ಈ ಸಂಸ್ಥೆಯ ಅವ್ಯವಸ್ಥೆಯಿಂದ ಈಗ ಸುಳ್ಯದ ಗ್ರಾಮೀಣ ಭಾಗದ ಜನರು ಮತ್ತು ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಚಾಲಕರಿಗೆ ಪರಿಷ್ಕೃತ ನೇಮಕಾತಿ ಪತ್ರ ನೀಡಿಲ್ಲ. ಎಲ್ಲರಿಗೂ ಮುಂದಿನ ಆದೇಶ ಬರುವ ತನಕ ಮನೆಗೆ ತೆರಳುವಂತೆ ಸೂಚಿಸಲಾಗಿದೆ. ಯಾವುದೇ ಪತ್ರ ಮೂಲಕ ವ್ಯವಹಾರ ನಡೆಸದ ಪನ್ನಗ ಸಂಸ್ಥೆ ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಕಳಿಸಿ ಕೈತೊಳೆದುಕೊಂಡಿದೆ. ಇದರಿಂದ ಬಸ್ ಚಾಲಕರು ಆಘಾತಗೊಂಡಿದ್ದಾರೆ. ಬೀದಿಗಳಿದು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನಮ್ಮನ್ನು ನಿಯಮ ಪ್ರಕಾರ ನಡೆಸಿಕೊಳ್ಳುತ್ತಿಲ್ಲ. ನಮಗೆ ಅಧಿಕೃತವಾಗಿ ಮಾಹಿತಿಯನ್ನು ನೀಡದೆ ಕೆಲಸದಿಂದ ಹೊರಗಟ್ಟುವ ಪ್ರಯತ್ನ ನಡೆಸಲಾಗುತ್ತಿದೆ. ನಮ್ಮ ಕೈನಿಂದ ತಲಾ 25 ಸಾವಿರ ರೂ. ಮುಂಗಡ ಹಣವನ್ನು ಪಾವತಿಸಿಕೊಂಡಿದ್ದಾರೆ. ಪನ್ನಗ ಸಂಸ್ಥೆ ಈಗ ಕೆಲಸಕ್ಕೆ ಸೇರಿ ಕೇವಲ ನಾಲ್ಕು ತಿಂಗಳಾದ ಚಾಲಕರನ್ನು ಕೂಡ ಮನೆಗೆ ಹೋಗುವಂತೆ ಸೂಚಿಸಲಾಗಿದೆ. ಹನ್ನೊಂದು ತಿಂಗಳಿಗೆ ನೇಮಕಾತಿ ಎಂದು ಒಪ್ಪಂದ ಮಾಡಿ ಮೋಸ ಮಾಡಿದ್ದಾರೆಂದು ಕೆಲವು ಚಾಲಕರು ನ್ಯೂಸ್ ನಾಟೌಟ್ ಜೊತೆಗೆ ಅವಲತ್ತುಕೊಂಡಿದ್ದಾರೆ. ಮಾತ್ರವಲ್ಲ ಭಾನುವಾರ ಹಠಾತ್ ಕೆಲಸವನ್ನು ನಿಲ್ಲಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಪರಿಷ್ಕೃತ ನೇಮಕಾತಿ ಪತ್ರ ಕೈಗೆ ಸಿಗುವ ವರೆಗೆ ಬಸ್ ಸ್ಟೇರಿಂಗ್ ಹಿಡಿಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕೆಲವು ಸಲ ಸರ್ಕಾರಿ ಯೋಜನೆಯನ್ನು ಖಾಸಗಿಯವರಿಗೆ ಬಿಟ್ಟು ಕೊಟ್ರೆ ಏನೆಲ್ಲ ಅನಾಹುತ ಮತ್ತು ಅವ್ಯವಸ್ಥೆ ಸಂಭವಿಸಬಹುದು, ಒಂದು ಪ್ರತಿಷ್ಠಿತ ಸಂಸ್ಥೆಗೆ ಹೇಗೆಲ್ಲ ಕೆಟ್ಟ ಹೆಸರು ಬರಬಹುದು ಅನ್ನೋದಕ್ಕೆ ಕೆಎಸ್ಆರ್ ಟಿಸಿ ಪರ್ಫೆಕ್ಟ್ ಉದಾಹರಣೆ. ಗುತ್ತಿಗೆ ಯೋಜನೆ ಅಡಿಯಲ್ಲಿ ಸರ್ಕಾರ ಡ್ರೈವರ್ ಗಳ ನೇಮಕ ಮಾಡಿದೆ. ಈ ಒಪ್ಪಂದದ ಅವಧಿಯಲ್ಲಿ ಯಾವುದೇ ಅವಘಡ ಸಂಭವಿಸಿದರೂ ಅದರ ಪಾಲನ್ನು ಸರ್ಕಾರ ಮತ್ತು ಗುತ್ತಿಗೆ ಸಂಸ್ಥೆ ತೆಗೆದುಕೊಳ್ಳುವ ಜವಾಬ್ದಾರಿ ಇರುತ್ತೆ. ಸದ್ಯ ವಾಟ್ಸಾಪ್ ನಲ್ಲಿ ಪನ್ನಗ ಸಂಸ್ಥೆ ವಾಯ್ಸ್ ಮೆಸೇಜ್ ಕಳಿಸಿ ನೌಕರರನ್ನು ಹೊರಗಟ್ಟುವ ಪ್ರಯತ್ನ ಮಾಡಿದೆ. ಇತ್ತ ಕೆಎಸ್ ಆರ್ ಟಿಸಿ ನಮ್ಮಿಂದ ರಿನೀವಲ್ ಆಗಿದೆ ಅಂತ ಹೇಳುತ್ತಿದೆಯಂತೆ. ಈ ಗೊಂದಲದಲ್ಲಿ ಚಾಲಕರ ಭವಿಷ್ಯ ಡೋಲಾಯಮಾನವಾಗಿದೆ. ಒಟ್ಟಿನಲ್ಲಿ ಖಾಸಗಿ ಗುತ್ತಿಗೆ ಸಂಸ್ಥೆಯವರು ಇಂತಹ ಎಡವಟ್ಟು ಮಾಡಿಕೊಳ್ಳುವುದಕ್ಕೆ ಇದೀಗ ಬಡ ಚಾಲಕರು ಬೀದಿಗಳಿಯುವಂತಾಗಿದೆ. ಈ ಸಮಸ್ಯೆ ಬಗೆ ಹರಿಯುವವರೆಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳುವುದಕ್ಕೆ ಸೋಮವಾರದಿಂದಲೇ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಯಾಣಿಕರು ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿ ಬರಬಹುದು.